ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗುವ ಸಲುವಾಗಿ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಆಗಮಿಸಿದ್ದರು.
ತಮ್ಮನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ಕುಸುಮಾ ಈ ಸಂದರ್ಭ ಅವರ ಅನುಪಸ್ಥಿತಿಯ ಕಾರಣ ವಾಪಸ್ ತೆರಳಿದರು. ಪಕ್ಷದ ಅಭ್ಯರ್ಥಿಯಾಗುವ ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಲು ಹಾಗೂ ಚುನಾವಣೆ ಪ್ರಚಾರ ಹಾಗೂ ಇತರೆ ವಿಚಾರಗಳ ಕುರಿತು ಚರ್ಚಿಸಲು ಆಗಮಿಸಿದ್ದರು ಎಂದು ತಿಳಿದುಬಂದಿದೆ.
ರವಿ ಹೆಸರು ಬಳಸಲ್ಲ: ನಂತರ ಮಾತನಾಡಿದ ಕುಸುಮಾ, ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಯಾರು ಅನ್ನುವುದು ಬೇಕಿಲ್ಲ. ನಾವು ಆ ಪಕ್ಷದ ಅಭ್ಯರ್ಥಿ ಅಂತ ಅಷ್ಟೇ ಎದುರಿಸುತ್ತೇವೆ. ನಮ್ಮ ಅತ್ತೆಯವರ ಹೇಳಿಕೆ ಆಶೀರ್ವಾದ ಇದ್ದಂತೆ. ಅವರು ದೊಡ್ಡವರು, ಅವರ ಆಶೀರ್ವಾದವಿದೆ. ರವಿಯವರ ಹೆಸರನ್ನ ಚುನಾವಣೆಯಲ್ಲಿ ಬಳಸಲ್ಲ. ಹಿಂದೆಯೂ ನಾನು ಅವರ ಹೆಸರು ಪ್ರಸ್ತಾಪಿಸಿಲ್ಲ. ಕ್ಷೇತ್ರ ದೊಡ್ಡದು ಇರಬಹುದು. ಆದರೆ ರಾಜಕೀಯ ನಮಗೆ ಹೊಸದಲ್ಲ ಎಂದರು.
ಪ್ರತಿಸ್ಪರ್ಧಿಗಳು ಯಾರು ಅನ್ನೋದು ಮುಖ್ಯವಲ್ಲ. ಕ್ಷೇತ್ರದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ನಾನು ನನ್ನದೇ ಆದ ಕನಸು ಕಟ್ಟಿಕೊಂಡಿದ್ದೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ. ಎಲ್ಲರೂ ನನ್ನನ್ನು ಒಪ್ಪಿಕೊಳ್ತಾರೆಂದು ಭರವಸೆ ವ್ಯಕ್ತಪಡಿಸಿದರು.
ನನಗೆ ರಾಜಕೀಯ ಹೊಸದಲ್ಲ: ಉಪಚುನಾವಣೆಯಲ್ಲಿ ಟಿಕೆಟ್ ಸಿಕ್ಕಿದೆ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಬಂದಿದ್ದೆ. ಸಂಜೆ ನಾಲ್ಕು ಗಂಟೆಗೆ ಮತ್ತೆ ಭೇಟಿ ಆಗ್ತೀನಿ. ನನ್ನ ತಂದೆ ರಾಜಕೀಯದಲ್ಲಿದ್ದವರು. ನನ್ನಂತ ವಿದ್ಯಾವಂತ ಮಹಿಳೆ ರಾಜಕೀಯ ಪ್ರವೇಶ ಮಾಡೋದು ಒಳ್ಳೆಯದು. ಎಲ್ಲ ಹೆಣ್ಣುಮಕ್ಕಳ ಧ್ವನಿಯಾಗಿ ಕೆಲಸ ಮಾಡ್ತೀನಿ ಎಂದ ಕುಸುಮಾ, ಮತದಾರರು ನನಗೆ ಆಶೀರ್ವಾದ ಮಾಡ್ತಾರೆ. ಪ್ರತಿಸ್ಪರ್ಧಿಗಳ ಬಗ್ಗೆ ನಾನು ಮಾತನಾಡಲ್ಲ. ಕ್ಷೇತ್ರದಲ್ಲಿ ನೀರು, ರಸ್ತೆ, ಶಿಕ್ಷಣ ಹೀಗೆ ಅನೇಕ ಸಮಸ್ಯೆಗಳಿವೆ ಎಂದು ತಿಳಿಸಿದರು.
ಸೂಕ್ತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದೆ: ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕಾಂಗ್ರೆಸ್ ಹೊಸ ಪಕ್ಷವಲ್ಲ. ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್ ಹೋರಾಟ ನಡೆಸಿದೆ. ಜಾತ್ಯಾತೀತ ತತ್ವವನ್ನು ಪಾಲಿಸಿದ್ದು ಕಾಂಗ್ರೆಸ್ ಮಾತ್ರ. ಆರ್ ಆರ್ ನಗರ ಅಭ್ಯರ್ಥಿಯಾಗಿ ಕುಸುಮಾ ಅವರಿಗೆ ಟಿಕೆಟ್ ಸಿಕ್ಕಿದೆ. ಸೂಕ್ತವಾದ ಅಭ್ಯರ್ಥಿಯನ್ನ ಪಕ್ಷ ಕಣಕ್ಕಿಳಿಸಿದೆ. ಎಲ್ಲ ಅರ್ಹತೆ ಕುಸುಮಾ ಅವರಿಗಿದೆ. ಅವರ ತಂದೆ 2008ರಲ್ಲಿ ಚುನಾವಣೆಗೆ ನಿಂತಿದ್ರು. ಕ್ಷೇತ್ರದ ಸಂಪೂರ್ಣ ಮಾಹಿತಿ ಅವರಿಗಿದೆ. ಎಲ್ಲವನ್ನೂ ಎದುರಿಸ್ತೀವಿ. ಬಿಜೆಪಿ, ಜೆಡಿಎಸ್ ಯಾವ ಕ್ಯಾಂಡಿಡೇಟ್ ಅನ್ನೋ ಪ್ರಶ್ನೆ ನಮ್ಮ ಮುಂದೆ ಇಲ್ಲ ಎಂದರು.