ಬೆಂಗಳೂರು: ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಬಾರದೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ ಅವರು, ಭಾರತವು ಸಾವಿರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡ, 560 ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ವಿಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟವಾಗಿದೆ.
ಇಂತಹ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಅನ್ಯಾಯವಾಗಿದೆ ಎಂದಿದ್ದಾರೆ. ಸೆಪ್ಟೆಂಬರ್ 14 ರಂದು ಭಾರತ ಒಕ್ಕೂಟ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾದ ಹಿಂದಿ ದಿವಸವನ್ನು ಕರ್ನಾಟಕದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಹಾಗಾಗಿ, ಸರ್ಕಾರ ಹಿಂದಿ ದಿವಸ ಆಚರಿಸಬಾರದು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿಟಿ ರವಿ ಬಯ್ಯುತ್ತಿರುವಾಗಲೇ ಸಿದ್ದರಾಮಯ್ಯ ಆಗಮನ.. ಕ್ಷಣ ಕಾಲ ತಬ್ಬಿಬ್ಬಾದ ಸಿಟಿ ರವಿ