ಬೆಂಗಳೂರು : ಹಲವಾರು ರೈತಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಋಣ ಮುಕ್ತ ಕಾಯಿದೆ ನಿನ್ನೆಯಿಂದ ಜಾರಿಗೆ ಬಂದಿದೆ. 1 ವರ್ಷದೊಳಗೆ ಸಾಲಗಾರರು ಈ ಕಾಯಿದೆ ಲಾಭ ಪಡೆಯಿರಿ ಎಂದು ನಿರ್ಗಮಿತ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ದೋಸ್ತಿ ಸರ್ಕಾರ ಪತನವಾದ ಬಳಿಕ ನಿರ್ಗಮಿತ ಸಿಎಂ ಕುಮಾರಸ್ವಾಮಿ ಮೊದಲ ಸುದ್ದಿಗೋಷ್ಠಿ ನಡೆಸಿದರು. ರೈತ ಪರ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಯೋಜನೆಗಳನ್ನ ಜಾರಿಗೊಳಿಸಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಅಧಿಕಾರಿಗಳಿಗೆ ಧನ್ಯವಾದ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಯಾವುದೇ ಸರ್ಕಾರ ಬರಲಿ ನಿಮ್ಮ ಕೆಲಸ ಹೀಗೆ ಮುಂದುವರೆಯಲಿ ಬಡವರ ಪರ ಹಾಗೂ ರಾಜ್ಯದ ಅಭಿವೃದ್ಧಿಗೆ ನಿಮ್ಮ ಸಹಕಾರ ಇರಲಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ರಾಜ್ಯದ ಅಭಿವೃದ್ಧಿ ನಮ್ಮ ಅಧಿಕಾರಿಗಳ ಮೇಲಿದೆ. ಕೃತಜ್ಞತೆ ಸಲ್ಲಿಸಲು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದು ಅವರು ಇದೇ ವೇಳೆ ತಿಳಿಸಿದರು.
ಋಣ ಮುಕ್ತ ಕಾಯಿದೆ :
ಸಾಲಮನ್ನಾ ಮಾಡಿದ ಖುಷಿ ಇದೆ. ಋಣ ಮುಕ್ತ ಕಾಯಿದೆಯನ್ನು ಜಾರಿಗೆ ತಂದಿದ್ದೇನೆ. ಇದರಿಂದ ಬಡವರಿಗೆ ಹೆಚ್ಚು ಅನುಕೂಲವಾಗಲಿದೆ. ಇತ್ತೀಚೆಗೆ ನಡೆಸಿದ ಗ್ರಾಮ ವಾಸ್ತವ್ಯದಲ್ಲಿ ವಾಸ್ತವ ಅರಿವಾಗಿದೆ. ವಾರ್ಷಿಕ 1.2ಲಕ್ಷ ವರಮಾನ ಇರುವವರು ಋಣಮುಕ್ತ ಕಾಯಿದೆ ಅನುಕೂಲ ಪಡೆಯಬಹುದು. ಈ ಹಿಂದೆ ಸಾಲ ಪಡೆದವರಿಗೂ ಈ ಕಾಯಿದೆ ಅನುಕೂಲವಾಗುತ್ತೆ ವಿಭಾಗಾಧಿಕಾರಿಗಳ ಬಳಿ 90 ದಿನಗಳೊಳಗೆ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ. ಇದು 1 ಬಾರಿಯ ಸೆಟಲ್ಮೆಂಟ್ ಮಾತ್ರವಾಗಿದ್ದು, ಬಡ್ಡಿ ದಂಧೆಗ ಕಡಿವಾಣ ಹಾಕಲು ಈ ಆ್ಯಕ್ಟ್ ಜಾರಿಗೊಳಿಸಿದ್ದೇನೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ರಾಷ್ಟ್ರಪತಿಗಳಿಗೆ ಕೃತಜ್ಞತೆ :
ಕಳೆದ ದೀಪಾವಳಿಯಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವಾಗ ಬಡವರಿಗೆ ಕೊಡುಗೆ ನೀಡಿದ್ದೇನೆ. ನಿನ್ನೆಯ ವರೆಗೆ ಯಾರೆಲ್ಲ ಸಾಲ ಮಾಡಿದ್ದಾರೆ ಅವರೆಲ್ಲರೂ ಋಣ ಮುಕ್ತರಾಗುತ್ತಾರೆ. ನಾನು ಇವತ್ತು ನಮ್ಮ ಕಚೇರಿಯಿಂದ ನಿರ್ಗಮಿಸುತ್ತಿದ್ದೇನೆ. ನಿರ್ಗಮಿಸುವ ಮುನ್ನ ನಾಡಿನ ಬಡ ಜನರ ಪರವಾಗಿ ರಾಷ್ಟ್ರಪತಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಇದೇ ವೇಳೆ ನಿರ್ಗಮಿತ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು.