ಬೆಂಗಳೂರು: ಕುಮಾರಸ್ವಾಮಿ ವಿಫಲ ರಾಜಕಾರಣಿ. ಉಪ ಚುನಾವಣೆಯಲ್ಲಿ ಬೆಂಗಳೂರಿನ ನಾಲ್ಕೂ ಕ್ಷೇತ್ರ ಸೇರಿ ಎಲ್ಲಾ 15 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದ್ದು, ಸ್ಥಿರ ಸರ್ಕಾರಕ್ಕಾಗಿ ಜನ ಮತ ನೀಡಲಿದ್ದಾರೆ ಎಂದು ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.3ಕ್ಕೆ ಉಪಚುನಾವಣ ಪ್ರಚಾರ ಮುಗಿಯುತ್ತದೆ. 15 ಕ್ಷೇತ್ರಗಳಲ್ಲಿ ಸಾಕಷ್ಟು ಸುತ್ತಾಡಿದ್ದೇನೆ. ರಾಜ್ಯದ ಜನ ಬಯಸಿರೋದು ಸ್ಥಿರ ಸರ್ಕಾರ. ಮೈತ್ರಿ ಸರ್ಕಾರದ ಕಿತ್ತಾಟ ಸೇರಿ ಹಲವು ವಿಚಾರಗಳನ್ನ ಜನ ನೋಡಿದ್ದಾರೆ. ನಾನು ಬಿಜೆಪಿಗೆ ಬಂದ ಬಳಿಕ ಕೊಟ್ಟ ಎಲ್ಲಾ ಉಪ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಚನ್ನಪಟ್ಟಣ ಉಪಚುನಾವಣೆ ನನಗೆ ಕೊಟ್ಟಿದ್ದರು. ದೇವದುರ್ಗ ಉಪಚುನಾವಣೆಯಲ್ಲಿ ಜನ ನಮ್ಮ ಪರ ತೀರ್ಪು ನೀಡಿದ್ದರು. ಚಿಂಚೋಳಿಯಲ್ಲೂ ಅವಿನಾಶ್ ಜಾಧವ್ ಗೆಲುವು ಸಾಧಿಸಿದರು. ಮಹಾಲಕ್ಷ್ಮಿಲೇಔಟ್‌ನ ಉಪಚುನಾವಣಾ ಉಸ್ತುವಾರಿ ನೀಡಿದ್ದಾರೆ. 2.81 ಲಕ್ಷ ಮತದಾರರಿದ್ದು, 200 ಬೂತ್ಗಳಲ್ಲಿ ನಾನೇ ಸುತ್ತಾಡಿದ್ದೇನೆ. ಎಲ್ಲರೂ ಸೇರಿ ಟೀಂ ವರ್ಕ್ ಮಾಡಿದ್ದೇವೆ. ಹೀಗಾಗಿ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗಿಂತ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಡಿ. 9ರವರೆಗೂ ಇರಿ ಗುಡ್ ನ್ಯೂಸ್ ಕೊಡುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಅವರು 6 ತಿಂಗಳು ಅಧಿಕಾರ ಇಲ್ಲದೆ ಈ ರೀತಿ ಮಾತನಾಡುತ್ತಾರೆ. ಅವರ ಪಕ್ಷದ 12 ಮಂದಿ ಶಾಸಕರು ಹೋಗಿದ್ದಾರೆ. ಯಾವ ಗುಡ್ ನ್ಯೂಸ್ ಕೊಡ್ತಾರೋ ನೋಡೋಣ ಎಂದರು.