ಬೆಂಗಳೂರು: ಜೆಡಿಎಸ್ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ಇಂದು ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸಾಂಕೇತಿಕ ಚಾಲನೆ ದೊರೆಯಿತು . ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ನ.1 ರಿಂದ ಕಾರ್ಯಕ್ರಮ: ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1994 ರಲ್ಲಿ ದೇವೇಗೌಡರು ಕೂಡ ಇಲ್ಲಿ ಪೂಜೆ ನಡೆಸಿ ಚುನಾವಣೆಗೆ ಹೋಗಿದ್ದರು. ನವೆಂಬರ್ 1 ರಿಂದ ಕಾರ್ಯಕ್ರಮಕ್ಕೆ ಚಾಲನೆ ಕೊಡಬೇಕಿತ್ತು. ನಾಳೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ ಗಾಂಧಿನಗರದಲ್ಲಿ ಸಾಂಕೇತಿಕವಾಗಿ ರಥಯಾತ್ರೆ ಮಾಡಲಾಗುತ್ತದೆ ಎಂದರು.
ಮೊದಲ ಹಂತದಲ್ಲಿ 35 ದಿನಗಳ ಕಾಲ ಈ ಕಾರ್ಯಕ್ರಮ ಮಾಡಲಾಗುತ್ತದೆ. ಇಡೀ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ನೀಡಲಾಗುತ್ತಿದೆ. ನೆಮ್ಮದಿಯ ಬದುಕನ್ನು ನೀಡಲು ಬುನಾದಿ ಈ ಕಾರ್ಯಕ್ರಮ. ಕಳೆದ ಗುರುವಾರ ಅಮೃತ ಘಳಿಗೆಯಲ್ಲಿ ಸಂಭವನೀಯ ಅಭ್ಯರ್ಥಿಗಳು ಚಾಮುಂಡೇಶ್ವರಿ ದರ್ಶನ ಮಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ನಮ್ಮ ಕುಟುಂಬ ಮತ್ತು ತಂದೆಯವರನ್ನು ಕಾಪಾಡಿದ್ದೇ ಶಿವ. ದೇವೇಗೌಡರಿಗೆ ರಕ್ಷಣೆ ಕೊಟ್ಟಿದ್ದು, ಅನಾರೋಗ್ಯಕ್ಕೆ ಒಳಗಾದಾಗಲೂ ಮರು ಜೀವ ಕೊಟ್ಟಿದ್ದು ಶಿವ. ಹಾಗಾಗಿ, ಶಿವನಿಗೆ ಪೂಜೆ ಸಲ್ಲಿಸಿದ್ದೇನೆ. ರಥಯಾತ್ರೆ, ಗ್ರಾಮ ವಾಸ್ತವ್ಯ ಕೂಡ ಮಾಡಲಾಗುತ್ತದೆ. ಇವತ್ತು ನಮ್ಮ ಪಕ್ಷಕ್ಕೆ ಇದು ಸವಾಲು. ರಾಷ್ಟ್ರೀಯ ಪಕ್ಷಗಳು ಜನರ ಬಗ್ಗೆ ತಲೆಕಡಿಸಿಕೊಂಡಿಲ್ಲ. ನಾನು ಹಿಂದೆ ರೈತರ ಸಾಲ ಮನ್ನಾ ಮಾಡಿದ್ದೆ. ಆಗಲೂ ರಾಷ್ಟ್ರೀಯ ಪಕ್ಷಗಳು ಲಘುವಾಗಿ ಮಾತನಾಡಿದ್ದವು. ಕಾಂಗ್ರೆಸ್ ನಾಯಕರಿಗೆ ಈಗ ಅಪ್ಪರ್ ಭದ್ರ ಬಗ್ಗೆ ಕಾಳಜಿ ಬಂದಿದೆ. ಐದು ವರ್ಷ ಸರ್ಕಾರ ಇದ್ದಾಗ ಏನು ಮಾಡಿದ್ರು. ಈಗ ಜನರಿಗೆ ನೀರು ಕೊಡ್ತಾರಾ ಇವರು ಎಂದು ವಾಗ್ದಾಳಿ ನಡೆಸಿದರು.
ಪಾಪದ ಹಣದಲ್ಲಿ ಆಪರೇಷನ್ ಕಮಲ: ತೆಲಂಗಾಣದಲ್ಲಿ ಆಮರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ನನಗೆ ಆಶ್ಚರ್ಯ ಏನೂ ಇಲ್ಲ. ಪಾಪದ ಹಣ ಇಟ್ಟುಕೊಂಡು ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿದ್ರು. ಇದೇ ಪಾಪದ ಹಣದಲ್ಲಿ ಬೇರೆ ಬೇರೆ ರಾಜ್ಯದಲ್ಲೂ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಓರಿಜಿನಲ್ ಕಾಂಗ್ರೆಸ್, ಬಿಜೆಪಿ ಇಲ್ಲ: ಕುಮಾರಸ್ವಾಮಿ ಕಿಡಿ
ತೆಲಂಗಾಣದಲ್ಲಿ ಅಷ್ಟು ಸುಲಭವಾಗಿ ಅಕ್ರಮ ಹಣದಿಂದ ಸರ್ಕಾರವನ್ನು ಅಸ್ಥಿರಗೊಳಿಸುವುದು ಅಸಾಧ್ಯ. ಇವತ್ತು ನೇರವಾಗಿ 17 ಕೋಟಿ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಯಾಕೆ ಜಾಣ ಮೌನ ತಾಳಿದ್ದಾರೆ. ಪ್ರಧಾನಿ ಹಾಗೂ ಇಡಿಯವರು ಇದಕ್ಕೆ ಉತ್ತರ ಕೊಡಬೇಕಿದೆ. ಈ ಹಣ ಎಲ್ಲಿಂದ ಹೇಗೆ ಬಂತು ಎಂಬುದರ ಬಗ್ಗೆ ಹೇಳಬೇಕೆಂದು ಒತ್ತಾಯಿಸಿದರು.