ಬೆಂಗಳೂರು : ಮೀಸಲಾತಿ ಸಿಗುವವರೆಗೂ ಮಠಕ್ಕೆ ಮರಳುವುದಿಲ್ಲ ಎನ್ನುವ ಘೋಷಣೆಯೊಂದಿಗೆ ಪಾದಯಾತ್ರೆ ಆರಂಭಿಸಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಈಗ ಮೀಸಲಾತಿ ಆದೇಶ ಪ್ರತಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಮಠಕ್ಕೆ ಮರಳುತ್ತಿದ್ದೇನೆ. ಸಚಿವ ಸಂಪುಟ ನಿರ್ಣಯ ಬಂದ ಕೂಡಲೇ ವಿಜಯೋತ್ಸವ ಸರಿಯಲ್ಲ, ಆದೇಶದ ಪ್ರತಿ ಸಿಗುವರೆಗೂ ವಿಜಯೋತ್ಸವ ಬೇಡ ಎಂದಿದ್ದೆ. ಇದೀಗ ಮೀಸಲಾತಿ ಆದೇಶದ ಪ್ರತಿಯನ್ನು ಸಿಎಂ ನೀಡಿದ್ದಾರೆ. ಹಾಗಾಗಿ ಗ್ರಾಮಗಳಲ್ಲೆಲ್ಲಾ ವಿಜಯೋತ್ಸವ ಆಚರಿಸಿ ಎಂದು ಸಮುದಾಯದ ಜನತೆಗೆ ಕೂಡಲ ಸಂಗಮ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀಗಳು ಕರೆ ನೀಡಿದ್ದಾರೆ.
ಆರ್.ಟಿ ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದ ಜಯಮೃತ್ಯುಂಜಯ ಶ್ರೀಗಳು, ವೀರಶೈವ ಲಿಂಗಾಯತ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವ ಆದೇಶ ಪ್ರತಿಯನ್ನು ಸ್ವೀಕರಿಸಿ ಸಮುದಾಯದ ಪರವಾಗಿ ಸಿಎಂ ಬೊಮ್ಮಾಯಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯ ಸರ್ಕಾರವು ನೀತಿ ಸಂಹಿತೆ ಜಾರಿಗೂ ಮೊದಲೇ ನ್ಯಾಯ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇದರ ಶ್ರೇಯಸ್ಸು ಎಲ್ಲರಿಗೂ ಸಿಗಬೇಕು. ಇದು ಮೊದಲ ಜಯ ನಮ್ಮನ್ನು 2ಡಿ ಗೆ ಸೇರಿಸಿದ್ದು, ಚುನಾವಣೆ ಮುಗಿದ ಬಳಿಕ ಒಬಿಸಿ ಮೀಸಲಾತಿಗೆ ಹೋರಾಟ ಆರಂಭವಾಗಲಿದೆ. ಇದೀಗ ಆದೇಶ ಪ್ರತಿಯನ್ನು ಸ್ವೀಕರಿಸಿದ್ದು, ಅಂಬೇಡ್ಕರ್, ಬಸವಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾನು ಮಠಕ್ಕೆ ತೆರಳಲಿದ್ದೇನೆ ಎಂದು ಶ್ರೀಗಳು ಹೇಳಿದರು.
ಮೀಸಲಾತಿ ಕ್ರಾಂತಿ ಮಾಡಿದ್ದು ಲಿಂಗಾಯತ ಸಮುದಾಯ : ಲಿಂಗಾಯತ ಪಂಚಮಸಾಲಿ, ಮಲೇಗೌಡ, ಎಲ್ಲಾ ಲಿಂಗಾಯತ ಸಮುದಾಯಗಳನ್ನು ಓಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಐತಿಹಾಸಿಕ ಪಾದಯಾತ್ರೆ ಹೋರಾಟ ಮಾಡಿದ್ದೇವು. ನಿರಂತರ ಹೋರಾಟ ಮಾಡಿದ ಪರಿಣಾಮ ಪ್ರಧಾನಮಂತ್ರಿಗಳು ನಮಗೆ ನ್ಯಾಯ ಕೊಡಿಸುವ ನಿರ್ದೇಶನ ನೀಡಿದರು. ನಾವು 2ಎ ಮೀಸಲಾತಿ ಕೇಳಿದ್ದೆವು. ಆದರೆ ಇತರೆ ಸಮುದಾಯಗಳಿಗೆ ಅನ್ಯಾಯ ಆಗಬಾರದು ಅಂತ 2ಡಿ ಮಾಡಿ ಲಿಂಗಾಯತದ ಎಲ್ಲಾ ಸಮುದಾಯ ಜೊತೆ ಮರಾಠ ಎಲ್ಲಾ ಸಮುದಾಯವನ್ನು ಸೇರಿಸಿದೆ. ಮೀಸಲಾತಿ ಕ್ರಾಂತಿ ಮಾಡಿದ್ದು ಲಿಂಗಾಯತ ಸಮುದಾಯ. ಸಚಿವ ಸಂಪುಟ ಸಭೆಯ ಬಳಿಕ ರಾಜ್ಯ ಪತ್ರಕ್ಕೆ ಕಾಯುತ್ತಿದ್ದು, ಇದೀಗ ರಾಜ್ಯಪತ್ರ ಕೊಡುವುದರ ಮೂಲಕ ಆದೇಶ ಪ್ರತಿ ನಮಗೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.
12ನೇ ಶತಮಾನದಲ್ಲಿ ಬಸವಣ್ಣ ದುಡಿಯುವ ವರ್ಗಕ್ಕೆ ಸಹಾಯ ಮಾಡಿದ್ದರು. ಇದೀಗಾ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮಧ್ಯಪ್ರವೇಶದಿಂದ ಮೀಸಲಾತಿ ಸಮಸ್ಯೆ ಬಗೆಹರಿದಿದೆ. ಕೇಂದ್ರ ಮತ್ತು ನಮ್ಮ ನಡುವೆ ಸೇತುವೆ ಆದ ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈರಣ್ಣ ಕಡಾಡಿ, ಅರವಿಂದ ಬೆಲ್ಲದ್, ಸಿದ್ದು ಸವದಿ ಎಲ್ಲರ ಸಹಕಾರ ಸಿಕ್ಕಿದ್ದು ಸಂತಸ ತಂದಿದೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಡಿಶಿಕೆ ಮಾತು ಸತ್ಯಕ್ಕೆ ದೂರ- ಜಯಮೃತ್ಯುಂಜಯ ಶ್ರೀ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತಿಗೆ ಜಯಮೃತ್ಯುಂಜಯ ಶ್ರೀಗಳು ಅಸಮಧಾನ ವ್ಯಕ್ತಪಡಿಸಿದರು. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ಮೀಸಲಾತಿ ತೀರ್ಮಾನ ಕೈಗೊಂಡಿದೆ. ನಮಗೆ ಸರ್ಕಾರದ ಪ್ರಮುಖರು ಫೋನ್ ಮಾಡಿ ಈ ಮೀಸಲಾತಿ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು ಎನ್ನುವ ಡಿಕೆ ಶಿವಕುಮಾರ್ ಮಾತು ಸತ್ಯಕ್ಕೆ ದೂರವಾದದ್ದು. ನಮಗೆ ಯಾರು ಒಪ್ಪಿಕೊಳ್ಳುವಂತೆ ಫೋನ್ ಮಾಡಿಲ್ಲ, ನಮ್ಮ ಸರ್ಕಾರ ಬಂದ ಮೇಲೆ ಈಗ ಮಾಡಿರೋ ಮೀಸಲಾತಿ ನಿರ್ಣಯ ರದ್ದು ಮಾಡುತ್ತೇವೆ ಅನ್ನೋದು ತಪ್ಪು. ಅವರ ಸರ್ಕಾರ ಬಂದರೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಅದು ಬಿಟ್ಟು ಈ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ. ಸದ್ಯದ ಮಟ್ಟಿಗೆ ನಮಗೆ ಸರ್ಕಾರ ನ್ಯಾಯ ದೊರಕಿಸಿಕೊಟ್ಟಿದೆ. ಈ ಹಿನ್ನೆಲೆ ವಿಜಯೋತ್ಸವಕ್ಕೆ ಕರೆ ಕೊಡುತ್ತಿದ್ದೇನೆ ಎಂದು ಶ್ರೀಗಳು ಹೇಳಿದರು.
ಧಮ್ ತಾಕತ್ ಇದ್ದರೆ ಮೀಸಲಾತಿ ತೆಗೆಯಲಿ - ಡಿಕೆಶಿಗೆ ಯತ್ನಾಳ್ ಎಚ್ಚರಿಕೆ : ಇನ್ನು ಇದೇ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ರಾಜ್ಯದಲ್ಲಿ ಲಿಂಗಾಯತರು, ಒಕ್ಕಲಿಗರು ದೊಡ್ಡ ಶಕ್ತಿ. ಶಿವಕುಮಾರ್ ಅನ್ನೋ ಮನುಷ್ಯನಿಗೆ ಧಮ್ ತಾಕತ್ ಅನ್ನೋದು ಇದ್ದರೆ ಮೀಸಲಾತಿ ತೆಗೆಲಿ ನೋಡೋಣ, ಅವರು ಏನಾದರೂ ತೆಗೆದರೆ ಸರ್ವನಾಶ ಆಗಿ ಹೋಗುತ್ತಾರೆ. ಅವರ ಬ್ರದರ್ಸ್ಗಾಗಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಆ ರೀತಿ ಮಾಡಿದರೆ ಅವರು ಮೆಕ್ಕಾ ಮದೀನಕ್ಕೆ ಹೋಗಬೇಕಾಗುತ್ತದೆ. ಅವರ ಸಮುದಾಯವೇ ಅವರಿಗೆ ಮತ ಹಾಕಲ್ಲ, ಹುಷಾರು ಎಂದು ಡಿಕೆ ಶಿವಕುಮಾರ್ ಗೆ ಎಚ್ಚರಿಕೆ ನೀಡಿದರು.
ಐತಿಹಾಸಿಕ ನಿರ್ಧಾರವನ್ನು ಬೊಮ್ಮಾಯಿ ಅವರು ಮಾಡಿದ್ದಾರೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೆಮದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ, ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 2ಎ ಅಡಿ ನೀಡಿದ್ದರೆ ಉಳಿದ ಸಮುದಾಯಕ್ಕೆ ಅನ್ಯಾಯ ಆಗುತ್ತಿತ್ತು. ಅದಕ್ಕಾಗಿ 2ಡಿ ಇಂದ ನಮಗೆ ನ್ಯಾಯ ಸಿಕ್ಕಿದೆ. ನಮಗೆ ಮೀಸಲಾತಿ ನೀಡಲು ಯಾರಿಂದಲೂ ಕಿತ್ತುಕೊಂಡಿಲ್ಲ. 2ಬಿ ಅಲ್ಲಿ ಇದ್ದದ್ದನ್ನು ನಮಗೆ ಹಂಚಿದ್ದಾರೆ. ಅವರಿಗೆ ಇಎಡ್ಲ್ಯುಎಸ್ ಅಡಿಯಲ್ಲಿ ನೀಡಿದ್ದಾರೆ. ಇಂದು ರಾಮಜನ್ಮ ದಿನವಾಗಿದ್ದು, ಇಂದು ನಮಗೆ ನ್ಯಾಯ ಸಿಕ್ಕಿದೆ ಎಂದು ಯತ್ನಾಳ್ ಹೇಳಿದರು.
75 ವರ್ಷ ಆದವರಿಗೆ, ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ ಟಿಕೆಟ್ ಇಲ್ಲ ಹಾಗು ಒಂದೇ ಕುಟುಂಬಕ್ಕೂ ಟಿಕೆಟ್ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಒಳ್ಳೆಯ ನಿರ್ಣಯ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಈ ಬಾರಿ ಯಾವುದೇ ಆಪರೇಷನ್ ಕಮಲ ಇಲ್ಲ, ಆಪರೇಷನ್ ಕಮಲ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ. ಆದರಿಂದ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ :ಬೆಂಗಳೂರು ನಗರದಲ್ಲಿ ಅದ್ಧೂರಿ ರಾಮನವಮಿ ಆಚರಣೆ.. ವಿವಿಧ ದೇವಾಲಯಗಳಲ್ಲಿ ಹೋಮ ಹವನ