ಬೆಂಗಳೂರು : ಕೆಎಸ್ಆರ್ಟಿಸಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ತಿರುಪತಿ ಪ್ಯಾಕೇಜ್ ಟೂರ್ ಪುನಾರಂಭವಾಗಿದೆ. ಕೊರೊನಾ ಹಿನ್ನೆಲೆ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ತಿರುಪತಿ ಪ್ಯಾಕೇಜ್ ಟೂರ್, ಜುಲೈ 16ರಿಂದ ಮತ್ತೆ ಆರಂಭವಾಗಲಿದೆ.
ಐರಾವತ ಕ್ಲಬ್ ಕ್ಲಾಸ್ ಬಸ್ನಲ್ಲಿ ಪ್ರಯಾಣ ಹಾಗೂ ತಿಮ್ಮಪ್ಪನ ದರ್ಶನವನ್ನು ಒಳಗೊಂಡ ಪ್ಯಾಕೇಜ್ ಟೂರ್ ನೀಡಲಿದೆ. ವಾರದ ದಿನಗಳಲ್ಲಿ 2200 ರೂಪಾಯಿ ಹಾಗೂ ವಾರಾಂತ್ಯದ ದಿನಗಳಲ್ಲಿ 2600 ರೂಪಾಯಿ ಪ್ರಯಾಣ ದರದಲ್ಲಿ ತಿಮ್ಮಪ್ಪನ ದರ್ಶನ ರಾಜ್ಯದ ಜನತೆಗೆ ದೊರೆಲಿದೆ. ಕೆಎಸ್ಆರ್ಟಿಸಿ ವೆಬ್ಸೈಟ್ ಮೂಲಕ ಸೀಟ್ ಬುಕ್ಕಿಂಗ್ಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ತಿರುಪತಿ ಬಸ್ಗಳನ್ನು ಶಾಂತಿನಗರ, ಜಯನಗರ 4ನೇ ಬ್ಲಾಕ್, ನಾಗಸಂದ್ರ, ಎನ್.ಆರ್.ಕಾಲೋನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತ್‌ಹಳ್ಳಿ, ಐಟಿಐ ಗೇಟ್, ಕೆಆರ್‌ಪುರಂ, ಹೊಸಕೋಟೆ ಮಾರ್ಗದ ಮೂಲಕ ಚಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಇನ್ನೊಂದು ಮಾರ್ಗವಾಗಿ ತಿರುಪತಿಯನ್ನು ವಾಯಾ ಮೈಸೂರು ರಸ್ತೆ ಮೂಲಕ ಸ್ಯಾಟಲೈಟ್ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ನವರಂಗ್, ಮಲ್ಲೇಶ್ವರಂ ಸರ್ಕಲ್, ಕೆಂಪೇಗೌಡ ಬಸ್ ನಿಲ್ದಾಣ, ಐಟಿಐ ಗೇಟ್, ಕೆಆರ್‌ಪುರ, ಹೊಸಕೋಟೆ ಮಾರ್ಗವಾಗಿ ಕ್ಲಬ್‌ಕ್ಲಾಸ್(ಮಲ್ಟಿ ಆ್ಯಕ್ಸಲ್) ವಾಹನದೊಂದಿಗೆ ಪ್ಯಾಕೇಜ್‌ನ ಜುಲೈ 16ರಿಂದ ಪುನಾರಂಭಿಸಿ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುವುದು ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.