ಬೆಂಗಳೂರು: ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಖಾಸಗಿ ಡ್ರೈವರ್‌ಗಳು ಕೆಎಸ್ಆರ್ಟಿಸಿ ಬಸ್ ಓಡಿಸುತ್ತಿರುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಎಸ್ಆರ್ಟಿಸಿ ಬಸ್ ಅನ್ನು ಖಾಸಗಿ ಬಸ್ ಡ್ರೈವರ್ ಚಲಾಯಿಸುತ್ತಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಬಸ್ ನಂಬರ್ ಕೆಎ 57 ಎಫ್ 4004 ಬಸ್ ಮೈಸೂರಿನಿಂದ ಚಾಮರಾಜನಗರಕ್ಕೆ ಸಂಚರಿಸುತ್ತಿದ್ದು, ಇದನ್ನು ಖಾಸಗಿ ಬಸ್ ಡ್ರೈವರ್ ಚಲಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಂಡಕ್ಟರ್ ಹಾಗೂ ಡ್ರೈವರ್ ಬಳಿ ಕೇಳಿದರೆ, ಅವರು ತಾವು ಸಾರಿಗೆ ನೌಕರರು ಎಂದು ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ನಿನ್ನೆಯಷ್ಟೇ ಬಿಎಂಟಿಸಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಅಪಘಾತವಾಗಿತ್ತು. ಅಪಘಾತವಾದ ಬಸ್ ಅನ್ನು ಆಟೋ ಡ್ರೈವರ್ ಓಡಿಸಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಬಸ್ ಖಾಸಗಿ ಕ್ಯಾಬ್ ಡ್ರೈವರ್ ಓಡಿಸುತ್ತಿದ್ದಾರೆ ಎಂಬ ದೂರು ಬಂದಿದ್ದು ಸಾರ್ವಜನಿಕರೊಬ್ಬರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ವಿಡಿಯೋ ಮಾಡಿದ್ದಾರೆ.
ಈ ಆರೋಪಕ್ಕೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಬಸ್ ಓಡಿಸುತ್ತಿರುವ ಖಾಸಗಿ ಡ್ರೈವರ್ ಎಂಬ ಸುದ್ದಿಯು ಸತ್ಯಕ್ಕೆ ದೂರವಾದದ್ದು. ಯಾವುದೇ ಒಂದೇ ಒಂದು ಬಸ್ಸನ್ನು ಖಾಸಗಿಯವರಾಗಲಿ, ನಿವೃತ್ತಿ ಹೊಂದಿದವರಾಗಲಿ ಚಾಲನೆ ಮಾಡುತ್ತಿಲ್ಲ. ಕಂಡಕ್ಟರ್ ಹಾಗೂ ಡ್ರೈವರ್ರನ್ನು ಕೇಳಿದ್ರೆ ನಾವು ಸಾರಿಗೆ ನೌಕರರು ಅಂತ ಒಪ್ಪಿಕೊಳ್ಳುತ್ತಿಲ್ಲ ಅನ್ನೋದು ನಿಜ. ಏಕೆಂದರೆ ನೌಕರರಿಂದ ಅವರಿಗೆ ನಿರಂತರ ಬೆದರಿಕೆ, ಹಲ್ಲೆ ಮಾಡುವುದಾಗಿ ಕರೆಗಳು ಬರುತ್ತಿರುವುದರಿಂದ ಅವರು ತಮ್ಮ ಗುರುತನ್ನು ಮರೆಮಾಚುತ್ತಿದ್ದಾರೆ ಎಂದಿದ್ದಾರೆ.
ಮೈಸೂರಿನಿಂದ ಚಾಮರಾಜನಗರ ಬಸ್ ಡ್ರೈವ್ ಮಾಡುತ್ತಿರುವವರು ಖಾಸಗಿ ಬಸ್ ಡ್ರೈವರ್ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ, ಬಸ್ ನಂಬರ್ ಕೆಎ 57 ಎಫ್ 4004 ಬಸ್ ಚಾಮರಾಜನಗರ ಘಟಕದ್ದಾಗಿದೆ. ಇದರ ಚಾಲಕ ಅಬೀದ್ ಹುಸೇನ್ Badge No.2202 ರವರು ಎಂದು ಸ್ಪಷ್ಟೀಕರಣ ನೀಡಲಾಗಿದೆ.