ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಬ್ಯಾಟರಿ ಸಿಸ್ಟಮ್ ಇಲ್ಲದೆ ಸೋಲಾರ್ ಹೇಗೆ ಕೊಡಬೇಕೆಂಬುದರ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಕುರಿತು 528 ಗ್ರಾಮ ಪಂಚಾಯತ್ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಸೋಲಾರ್ ದೀಪಗಳ ಅಳವಡಿಕೆ ಕುರಿತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮೋಡ ಬಿತ್ತನೆ ರದ್ದು:
ಮೋಡ ಬಿತ್ತನೆ ಟೆಂಡರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಜಲಪ್ರಳಯ ಆಗಿದೆ. ಮೋಡ ಬಿತ್ತನೆ ಬೇಡ ಅನ್ನೋದು ನನ್ನ ನಿರ್ಧಾರ. ಮೋಡ ಬಿತ್ತನೆ ಸಂಬಂಧ ಕಳೆದ ಸರ್ಕಾರ 2 ವರ್ಷದ ಟೆಂಡರ್ ಕರೆದಿತ್ತು. ಸದ್ಯಕ್ಕೆ ಯಾವುದೇ ಕಾರಣಕ್ಕೂ ಮೋಡ ಬಿತ್ತನೆ ಮುಂದುವರೆಸಬಾರದು ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜಕಾರಣಿ ಪುತ್ರರೊಬ್ಬರಿಗೆ ಮೋಡ ಬಿತ್ತನೆ ಗುತ್ತಿಗೆ ಟೆಂಡರ್ ಕೊಟ್ಟಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ರಾಜ್ಯದ ಹಣ ಸರಿಯಾಗಿ ಬಳಕೆ ಆಗಬೇಕು. ಎರಡು ವರ್ಷ ಮೋಡ ಬಿತ್ತನೆ ಗುತ್ತಿಗೆ ಏಕೆ ಕೊಟ್ಟಿದ್ದಾರೆ ಅಂತ ಗೊತ್ತಿಲ್ಲ. ಅದರಲ್ಲಿ ಯಾವ ರೀತಿ ಒಪ್ಪಂದ ಇದೆ ಅನ್ನೋದರ ಕುರಿತು ವಿಚಾರಿಸುತ್ತೇನೆ. ಅದರ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರಪ್ಪ ಹೇಳಿದ್ದಾರೆ.