ಬೆಂಗಳೂರು: ಇನ್ಮುಂದೆ ಒಂದೇ ಒಂದು ದೇವಸ್ಥಾನ ಒಡೆಯಲು ನಾವು ಬಿಡಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ದೇವಸ್ಥಾನ ಒಡೆದಿದ್ದು ತಪ್ಪು. ಸಿಎಂಗೆ, ಸಂಬಂಧಪಟ್ಟ ಸಚಿವರಿಗೆ ಹೇಳದೇ ದೇವಸ್ಥಾನ ಒಡೆದಿದ್ದು ತಪ್ಪು ಮಾಡಿದ್ದಾರೆ ಎಂದರು.
ಡಿಸಿ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಏನೇ ಹೇಳಬಹುದು. ಆದ್ರೆ ದೇವಸ್ಥಾನಗಳ ರಕ್ಷಣೆ ಮಾಡುವುದು ಅಗತ್ಯ. ಡಿಸಿಗಳು ತುರ್ತಾಗಿ ಇಂತಹ ಕ್ರಮಕ್ಕೆ ಮುಂದಾಗಬಾರದು. ನಾನು ಸಿಎಂ ಜತೆ ಚರ್ಚೆ ಮಾಡುತ್ತೇನೆ ಎಂದರು.
ದೇವಸ್ಥಾನ ಒಡೆದು ಹಾಕಿದ್ದು ತಪ್ಪು
ಇಡೀ ರಾಜ್ಯದಲ್ಲಿ ದೇವಸ್ಥಾನ ಒಡೆಯುವ ಆತಂಕ ಎದುರಾಗಿದೆ. ಬಿಜೆಪಿ ಸರ್ಕಾರ ಇರುವಂತ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೇವಸ್ಥಾನ ಒಡೆದು ಹಾಕಿದ್ದು ತಪ್ಪೆ. ಯಾಕೆ ದೇವಸ್ಥಾನ ಮಾತ್ರ ಮುಟ್ಟಿದರು ಅನ್ನೋದು ಕೂಡ ಪ್ರಶ್ನೆಯೇ. ಕಾಂಗ್ರೆಸ್ ನಾಯಕರು ಹೇಳಿದ್ದರಲ್ಲೂ ಯಾವುದೇ ತಪ್ಪಿಲ್ಲ. ಈಗಲಾದರೂ ಕಾಂಗ್ರೆಸ್ ನಾಯಕರಿಗೆ ದೇವಸ್ಥಾನ ಉಳಿಸಬೇಕು ಅಂತ ಅನಿಸಿದೆಯಲ್ಲ. ಅದು ಮುಖ್ಯ ಎಂದು ಈಶ್ವರಪ್ಪ ಹೇಳಿದರು.
ಯಾರ ವಿರುದ್ಧ ಕ್ರಮ ಎನ್ನೋದು ನನ್ನ ಉದ್ದೇಶವಲ್ಲ. ಆದರೆ ಇಡೀ ರಾಜ್ಯದಲ್ಲಿ ದೇವಸ್ಥಾನಗಳನ್ನು ಯಾರೂ ಒಡೆಯಬಾರದು. ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ, ಯಾವುದನ್ನೂ ಒಡೆಯಬಾರದು ಎಂದು ಸಚಿವರು ಹೇಳಿದರು.
ಅನಧಿಕೃತ ಪ್ರಾರ್ಥನಾ ಮಂದಿರ ತೆರವಿಗೆ ಸಿಎಸ್ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಸ್ ದೇವಸ್ಥಾನ ತೆರವು ಮಾಡಿ ಅಂತ ಹೇಳಲಿಲ್ಲ. ಆದರೆ, ಮೈಸೂರು ಡಿಸಿ ಯಾಕೆ ದೇವಸ್ಥಾನವನ್ನೇ ಒಡೆದು ಹಾಕಿದ್ರು?. ಯಾರ ಮೇಲೆ ಕ್ರಮ ಅನ್ನೋದು ಮುಖ್ಯ ಅಲ್ಲ. ಸಿಎಸ್ ಮೇಲೆ, ಡಿಸಿ ಮೇಲೆ ಕ್ರಮ ಆಗಬೇಕು ಅಂತ ನಾನು ಹೇಳಲ್ಲ. ಆದರೆ ದೇವಸ್ಥಾನ ಒಡೆದಿದ್ದು ತಪ್ಪು. ಸರ್ಕಾರ ಇದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಇದನ್ನೂ ಓದಿ: ದಸರಾ ಮಹೋತ್ಸವ: ಗಜಪಡೆಗೆ 30 ಲಕ್ಷ ರೂ.ವಿಮೆ ಘೋಷಣೆ