ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಳೆದ ಎಲ್ಲ ಸರ್ಕಾರಗಳ ಅವಧಿಯಲ್ಲಿ ಕಂಡ ಅಭಿವೃದ್ಧಿಗಿಂತ ಹೆಚ್ಚು ಪ್ರಗತಿ ಕಂಡಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾಧಿಸಿದ ಸಾಧನೆಗಳ ವಿವರ ಬಿಡುಗಡೆ ಮಾಡಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ವಿವರಣೆ ನೀಡಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ದೊಡ್ಡ ಸಾಧನೆ ಮಾಡಿದೆ. 2019-20ರಲ್ಲಿ 13 ಕೋಟಿ ಮಾನವ ದಿನ ಗುರಿ ಕೊಟ್ಟಿದ್ದರು. ನಾವು 15 ಕೋಟಿ ಮಾನವ ದಿನ ಬಳಕೆ ಮಾಡಿದ್ದೇವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.38ರಷ್ಟು ಹೆಚ್ಚಳವಾಗಿದೆ ಎಂದರು.
ಪ್ರವಾಹದಿಂದ ಉಂಟಾದ ಹಾನಿಯಿಂದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಪಿಎಂಜಿಎಸ್ವೈ ಅಡಿ 3,236 ಕಿ.ಮೀ ಉದ್ದ ರಸ್ತೆ ಹಾಗೂ 26 ಸೇತುವೆ ನಿರ್ಮಾಣ ಮಾಡಲಾಗಿದೆ. 1,848 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 1,000 ಕೋಟಿ ರೂ.ವೆಚ್ಚದಲ್ಲಿ 975 ಗ್ರಾಮಗಳ ಅಭಿವೃದ್ಧಿ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯತ್‌ಗಳ ಡಿಜಿಟಲೀಕರಣ : ಮನೆ ಮನೆಗೆ ಗಂಗೆ ಯೋಜನೆಡಿ 3.75 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯದಲ್ಲಿ 49 ತಾಲೂಕುಗಳ ರಚನೆ ಮಾಡಿದ್ದೇವೆ. ಗ್ರಾಮ ಪಂಚಾಯತ್‌ಗಳ ಡಿಜಿಟಲೀಕರಣ ಮಾಡಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಹಾಗೂ ಸದಸ್ಯರಿಗೆ ತರಬೇತಿ ನೀಡಲಾಗಿದೆ.
ಗ್ರಾಮ ಪಂಚಾಯತ್‌ಗಳಿಗೆ ಸೋಲಾರ್ ಲೈಟ್ ವಿತರಣೆ ಮಾಡಿದ್ದೇವೆ. ಆರ್ಥಿಕ ಪ್ರಗತಿ 2019-20ರಲ್ಲಿ 88.28 ಕೋಟಿ ರೂ. ಆಗಿದ್ದರೆ, 2020-21ರಲ್ಲಿ ಇದು 163.68 ಕೋಟಿಗೆ ಏರಿಕೆಯಾಗಿದೆ. ಪ್ರಮುಖ ಕಾಮಗಾರಿಗಳ ರೈತರ ಜಮೀನಿನಲ್ಲಿ ತೆಗೆದುಕೊಂಡ ಕಂದಕ ಬದು ನಿರ್ಮಾಣ, ಕೃಷಿ ಹೊಂಡ, ದನದ ಕೊಟ್ಟಿಗೆ, ಬಚ್ಚಲು ಗುಂಡಿ ಹಾಗೂ ಚೆಕ್ ಡ್ಯಾಮ್ ನಿರ್ಮಾಣದಲ್ಲಿಯೂ ದೊಡ್ಡ ಪ್ರಗತಿ ಸಾಧಿಸಲಾಗಿದೆ.
2020-21ನೇ ಆರ್ಥಿಕ ಸಾಲಿನಲ್ಲಿ ವಿಶೇಷ ಅಭಿಯಾನದಡಿ ಬದು ಮತ್ತು ಬದು ಬೇಸಾಯ ಅಭಿಯಾನ, ಬಚ್ಚಲು ಗುಂಡಿ ಅಭಿಯಾನ ಕ್ರಿಯಾ ಯೋಜನೆ ಅಭಿಯಾನ, ಮಹಿಳಾ ಕಾಯಕೋತ್ಸವ ಹಾಗೂ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ರಸ್ತೆಗಳ ನಿರ್ಮಾಣ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ್ ಮಿಷನ್, ಪಂಚಾಯತ್ ರಾಜ್ ಇಲಾಖೆಯ ವಿವಿಧ ಕಾರ್ಯಕ್ರಮಗಳು, ಇಲಾಖೆಯಿಂದ ಸ್ವೀಕೃತಗೊಂಡ ಕಡತಗಳ ವಿಲೇವಾರಿ ಸೇರಿ ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು.