ಬೆಂಗಳೂರು: ತಮ್ಮ ಮೇಲಿನ ಕಳಂಕ ನಿವಾರಣೆ ಮಾಡಿಕೊಳ್ಳುವುದಕ್ಕಾದರೂ ಸಚಿವ ಸಂಪುಟ ವಿಸ್ತರಣೆ ಮಾಡಿ ಮಂತ್ರಿ ಭಾಗ್ಯ ನೀಡಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಬಿಜೆಪಿ ವರಿಷ್ಠರಿಗೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ಕಳಂಕದ ಆರೋಪ ಕೇಳಿಬಂದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಾಗಿದೆ. ತನಿಖಾ ಸಂಸ್ಥೆಗಳು ಕ್ಲೀನ್ಚಿಟ್ ನೀಡಿ ನ್ಯಾಯಾಲಯಕ್ಕೆ ತಮ್ಮ ಪಾತ್ರ ಇಲ್ಲ ಎಂದು ಬಿ ರಿಪೋರ್ಟ್ ಸಹ ಸಲ್ಲಿಸಿವೆ. ರಾಜ್ಯದ ಜನತೆಗೆ ಮತ್ತು ನಮ್ಮ ರಾಜಕೀಯ ವಿರೋಧಿಗಳಿಗೆ ನಾವು ಕಳಂಕ ರಹಿತರು ಎಂದು ದಿಟ್ಟ ಉತ್ತರ ನೀಡಲು ಮಂತ್ರಿಮಂಡಲಕ್ಕೆ ತಮ್ಮನ್ನು ಸೇರಿಸಿಕೊಳ್ಳಬೇಕೆಂದು ಮಾಜಿ ಸಚಿವರಾದ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಪಕ್ಷದ ವರಿಷ್ಠರಲ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರ್ಎಸ್ಎಸ್ ಮತ್ತು ಬಿಜೆಪಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರುವ ಬಿ ಎಲ್ ಸಂತೋಷ್ ಮೂಲಕ ಸಚಿವ ಸ್ಥಾನಕ್ಕೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇನ್ನೊಬ್ಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೇಂದ್ರದಲ್ಲಿನ ಪ್ರಭಾವಶಾಲಿ ಸಚಿವರಾದ ಪ್ರಹ್ಲಾದ್ ಜೋಷಿ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ವಿಚಾರ : ಶೀಘ್ರದಲ್ಲೇ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಎಂದ ಸಿಎಂ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಮಿಷನ್ ಕೇಳಿದ ಆರೋಪದ ಮೇಲೆ ಕೆ ಎಸ್ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲೈಂಗಿಕ ದುರ್ಬಳಕೆ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಸಚಿವರ ರಾಜೀನಾಮೆ ನಂತರ ಈ ಎರಡೂ ಪ್ರಮುಖ ಪ್ರಕರಣಗಳ ಬಗ್ಗೆ ಪ್ರತ್ಯೇಕ ತನಿಖೆ ನಡೆಸಿದ ಎಸ್ಐಟಿ ಬಿ ರಿಪೋರ್ಟ್ ಸಲ್ಲಿಸಿ, ಕ್ಲೀನ್ ಚಿಟ್ ನೀಡಿತ್ತು.
ರಾಜಕೀಯವಾಗಿ ವಿವಾದಗಳನ್ನು ಸೃಷ್ಟಿಸಿದ್ದ ಈ ಎರಡೂ ಪ್ರಕರಣಗಳಲ್ಲಿ ಪಕ್ಷದ ಹೈಕಮಾಂಡ್ ಅಪೇಕ್ಷೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈಶ್ಚರಪ್ಪ ಮತ್ತು ರಮೇಶ್ ಜಾರಕಿಹೊಳಿ ಕ್ಲೀನ್ ಚಿಟ್ ಸಿಕ್ಕ ತಕ್ಷಣ ಮಂತ್ರಿ ಮಂಡಲ ಸೇರುವ ಆಸಕ್ತಿ ವ್ಯಕ್ತಪಡಿಸಿದ್ದರು. ಸಚಿವ ಸಂಪುಟ ವಿಸ್ತರಣೆ ನಡೆಯದೇ ಇರುವುದರಿಂದ ಪಕ್ಷದ ನಡೆ ಬಗ್ಗೆ ಬೇಸರಗೊಂಡು ತಮ್ಮ ಅತೃಪ್ತಿ ಹೊರಹಾಕಿದ್ದಾರೆ.
ಕಳೆದ ತಿಂಗಳು ನಡೆದ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಕಾರ್ಯ ಕಲಾಪಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ಸಂದೇಶವನ್ನು ರವಾನಿಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಮತ್ತು ಹೈಕಮಾಂಡ್ ನಿರ್ಧಾರ: ಆರ್ ಅಶೋಕ್
ವಿಧಾನಸಭೆಗೆ ಚುನಾವಣೆ ನಡೆಯಲು ಕೆಲವೇ ತಿಂಗಳುಗಳು ಮಾತ್ರ ಬಾಕಿಯುಳಿದಿವೆ. ಇರುವ ಅಲ್ಪ ಅವಧಿಗಾದರೂ ತಮ್ಮನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ತಾವು ಕಳಂಕಿತರಲ್ಲ ಎಂದು ರಾಜಕೀಯ ವಿರೋಧಿಗಳಿಗೆ ಉತ್ತರ ನೀಡಲು ಅವಕಾಶ ನೀಡಬೇಕು. ಸಚಿವರಾಗಿ ನೇಮಕ ಮಾಡದಿದ್ದಲ್ಲಿ ತಮ್ಮ ಮೇಲಿನ ಕಳಂಕದ ಆರೋಪ ನಿವಾರಣೆಯಾದಂತಾಗುವುದಿಲ್ಲ ಎನ್ನುವ ವಾದವನ್ನ ಮುಖಂಡರ ಮುಂದೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೊಲೆಗಡುಕರ ಕೇಸ್ ವಾಪಸ್ ತಗೆದುಕೊಂಡರಲ್ಲ ಅದಕ್ಕೆ ಕಾಂಗ್ರೆಸ್ ನಶಿಸುತ್ತಿದೆ : ಕೆ ಎಸ್ ಈಶ್ವರಪ್ಪ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯೂ ಈ ಇಬ್ಬರು ಮುಖಂಡರು ಕ್ಲೀನ್ ಚಿಟ್ ದೊರೆತ ಮೇಲೆ ಮಂತ್ರಿಮಂಡಲಕ್ಕೆ ಮತ್ತೊಮ್ಮೆ ತಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಿಎಂ ಬೊಮ್ಮಾಯಿ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಲಾಬಿ: ಸಿಎಂ ಭೇಟಿಯಾದ ಜಾರಕಿಹೊಳಿ, ಯೋಗೇಶ್ವರ್