ಬೆಂಗಳೂರು : ಹೆಸರಿಗೆ ಮಾತ್ರ ಅದು ಗಾಂಧಿ ಗ್ರಾಮ. ಆದರೆ, ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯ ಗ್ರಾಮ ಸ್ವರಾಜ್ಯದ ಕನಸು ಇನ್ನೂ ನನಸಾಗಲೇ ಇಲ್ಲ. ಸ್ವಾತ್ರಂತ್ರ್ಯ ಬಂದು ಸುಮಾರು 70 ವರ್ಷ ಕಳೆದರೂ ಗ್ರಾಮದ ತೆಗ್ಗು ಬಿದ್ದ ರಸ್ತೆಗಳಿಗೆ ಮುಕ್ತಿ ಸಿಕ್ಕಿಲ್ಲ. ಗ್ರಾಮದ ಅಭಿವೃದ್ಧಿಗೆ ರಾಜಕಾರಣೆಗಳೇ ತಡೆಹಾಕುತ್ತಿದ್ದಾರೆ ಎಂಬ ಆಪಾದನೆ ಕೇಳಿಬರುತ್ತಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕೃಷ್ಣರಾಜಪುರಕ್ಕೆ ಗಾಂಧಿ ಗ್ರಾಮವೆಂದೇ ಕರೆಯಲಾಗುತ್ತಿದೆ. ರಾಜಧಾನಿ ಬೆಂಗಳೂರಿನಿಂದ ಕೂಗಳತೆಯ ದೂರದಲ್ಲಿರುವ ಗ್ರಾಮ ಅಭಿವೃದ್ಧಿಯಿಂದ ಸಾಕಷ್ಟು ದೂರವಾಗಿದೆ. ಸ್ದಳೀಯ ಜನಪ್ರತಿನಿಧಿಗಳ ವೈಷಮ್ಯದಿಂದ ಗ್ರಾಮಕ್ಕೆ ಬೇಕಾದ ರಸ್ತೆ ಇಲ್ಲವಾಗಿದೆ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಚೆಲುವರಾಜು ಹಾಗೂ ಹಾಲಿ ಜಿಲ್ಲಾ ಪಂಚಾಯತಿ ಸದಸ್ಯ ಪುಷ್ಪಾ ಸಂಪತ್ ಬಾಬುರ ರಾಜಕೀಯ ದ್ವೇಷದಿಂದ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಿಗೆ ಮೂಲಸೌಕರ್ಯ ನಿರ್ಮಿಸಲು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನೂ ಮೂಲಭೂತ ಸೌಲಭ್ಯ ದೊರೆಯದ ಗ್ರಾಮಸ್ಥರು ರಾಜಕಾರಣಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಚೆಲುವರಾಜುರ ದ್ವೇಷದಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ನೆನೆಗುದಿಗೆ ಬಿದ್ದಿದೆ. ಹದಗೆಟ್ಟ ರಸ್ತೆಯಿಂದಾಗಿ ಗ್ರಾಮಕ್ಕೆ ಆಟೋ ಸಹ ಬರುತ್ತಿಲ್ಲ. ರಸ್ತೆಯ ಸ್ಥಿತಿ ನೋಡಿ ಅಂಬ್ಯುಲೆನ್ಸ್ ಸಹ ಗ್ರಾಮಕ್ಕೆ ಬರುತ್ತಿಲ್ಲ. ಗರ್ಭಿಣಿ ಮಹಿಳೆಯರು ಮತ್ತು ರೋಗಿಗಳು ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿ ಉಂಟಾಗಿದೆ.