ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ ರಾಚೇನಹಳ್ಳಿ ಕೆರೆ ಪಕ್ಕದ ಬಯಲು ವ್ಯಾಯಾಮ ಶಾಲೆಗೆ ತೆರಳಿ ಅಲ್ಲಿದ್ದ ಜನರಿಗೆ ಹೆಲ್ತ್ ಮತ್ತು ಫಿಟ್ನೆಸ್ ವಿಚಾರವಾಗಿ ಸಲಹೆ, ಸೂಚನೆ ನೀಡಿದರು.
ಬ್ಯಾಟರಾಯನಪುರ ಕ್ಷೇತ್ರದ ಕೆರೆ ಪಕ್ಕದ ವಾಕಿಂಗ್ ಟ್ರ್ಯಾಕ್ ಹಾಗೂ ಜಿಮ್ಗಳಲ್ಲಿ ವ್ಯಾಯಾಮ ಮಾಡುತ್ತಿದ್ದ ಸಾರ್ವಜನಿಕರೊಂದಿಗೆ ಚರ್ಚಿಸಿದ ಅವರು, ಸಕ್ರಿಯ ಜೀವನ ಶೈಲಿ, ಗುಣಮಟ್ಟದ ಆಹಾರ ಮತ್ತು ಸುಸ್ಥಿರ ಪರಿಸರ ಒಂದಕ್ಕೊಂದು ಬೆಸೆದುಕೊಂಡಿವೆ. ಹೀಗಾಗಿ ಈ ಮೂರು ವಿಚಾರಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಬೇಕಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ತಿಳುವಳಿಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
![Krishnabhairegowda](https://etvbharatimages.akamaized.net/etvbharat/images/kn_bng_01_02042019-kbg_finess_photo2-sanjaynag_0204digital_01084_345.jpg)
ತಮ್ಮ ಆರೋಗ್ಯದ ಗುಟ್ಟನ್ನೂ ಬಹಿರಂಗಪಡಿಸಿದ ಕೃಷ್ಣಭೈರೇಗೌಡರು, ತಾವಿಷ್ಟು ಆರೋಗ್ಯವಾಗಿರಲು ವ್ಯಾಯಾಮವೇ ಕಾರಣ. ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ತಮಗೆ ಒತ್ತಡ ಸಹಜವಾಗಿಯೇ ಹೆಚ್ಚಿರುತ್ತದೆ. ಈ ಒತ್ತಡ ನಿವಾರಿಸಿಕೊಳ್ಳಲು ನಿತ್ಯವೂ ವಾಕಿಂಗ್, ಯೋಗ ಮತ್ತಿತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ವಾರಕ್ಕೆ ಕನಿಷ್ಠ ಐದು ದಿನವಾದರೂ ವ್ಯಾಯಾಮ ಮಾಡುತ್ತೇನೆ. ಊಟಕ್ಕೆ ಮುದ್ದೆ, ಸೊಪ್ಪು, ತರಕಾರಿಗಳನ್ನು ಬಳಸುತ್ತೇನೆ. ಹೀಗಾಗಿಯೇ ಹಲವು ವರ್ಷಗಳಿಂದ ಶಾಸಕನಾಗಿ, ಸಚಿವನಾಗಿ ಬಿಡುವಿಲ್ಲದ ಕೆಲಸಗಳ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದರು.
ಸಿರಿಧಾನ್ಯ ಬಳಸಿ:
ಜನರು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ನಗರ ಪ್ರದೇಶದ ಜನರಲ್ಲಿ ಆರೋಗ್ಯದ ಮೇಲೆ ಕಾಳಜಿ ಹೆಚ್ಚುತ್ತಿದೆ. ಸಿರಿಧಾನ್ಯ (ಮಿಲ್ಲೆಟ್ಸ್) ಹಾಗೂ ಸಾವಯವ ಆಹಾರದ (ಆರ್ಗಾನಿಕ್ ಫುಡ್) ಮತ್ತು ಪ್ರಕೃತಿ ಸಹಜ ಆಹಾರ ಪದ್ಧತಿ ಅಳವಡಿಸಿಕೊಳ್ಳಿ. ಇದರಿಂದ ಕೃಷಿ ವೆಚ್ಚ ಇಳಿಕೆಯಾಗಿ ರೈತರಿಗೆ ಸಾಕಷ್ಟು ಲಾಭ ಸಿಗಲಿದೆ ಎಂದರು.
ಉದ್ಯೋಗಾವಕಾಶ:
ಸಿರಿಧಾನ್ಯ ಬೆಳೆಗಳಿಗೆ ಹೆಚ್ಚಿನ ನೀರಿನ ಅಗತ್ಯ ಇರುವುದಿಲ್ಲ. ನೀರಿನ ಅಭಾವ ಎದುರಾಗಿರುವ ಈ ಕಾಲದಲ್ಲಿ ಭತ್ತದಂತ ಬೆಳೆಗಳು ಕಷ್ಟ. ಸಿರಿಧಾನ್ಯ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಒಳ್ಳೆಯದು. ಸಾವಯವ ಕೃಷಿಯಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸಾವಯವ ಮತ್ತು ಸಿರಿಧಾನ್ಯ ಆಹಾರದ ಮಹತ್ವ ಅರ್ಥವಾದಂತೆ ಈ ಮಾದರಿಯ ಆಹಾರ ಉತ್ಪಾದನೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಸಾವಯವ ಮತ್ತು ಸಿರಿಧಾನ್ಯಗಳ ಸಿದ್ಧ ಆಹಾರ ಪದಾರ್ಥಗಳ ವ್ಯವಹಾರಗಳಿಂದ ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದರು.
ಅಭಿವೃದ್ಧಿಗೆ 20 ಕೋಟಿ ಮೀಸಲು:
ನಗರ ಪ್ರದೇಶಗಳಲ್ಲಿ ನಮ್ಮ ಸರ್ಕಾರ ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಬಯಲು ವ್ಯಾಯಾಮ ಶಾಲೆಗಳನ್ನು ನಿರ್ಮಾಣ ಮಾಡುತ್ತಿದೆ. ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರದ ರಾಚೇನಹಳ್ಳಿ ಕೆರೆಯನ್ನು 20 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಕ್ಷೇತ್ರದಲ್ಲಿ ಇದೇ ರೀತಿಯ ಹತ್ತು ಕೆರೆಗಳ ಅಭಿವೃದ್ಧಿ ಮತ್ತು ಉದ್ಯಾನವನಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ ಎಂದರು.
ಬದಲಾವಣೆ ತರಬಹುದು:
ಕೀಟನಾಶಕಗಳು ಮತ್ತು ಕಳೆ ನಾಶಕಗಳನ್ನು ನಿಯಂತ್ರಿಸಿದರೆ ಆಹಾರದ ಗುಣಮಟ್ಟ ಹೆಚ್ಚುತ್ತದೆ. ಆದರೆ ಏಕಾಏಕಿ ನಿಯಂತ್ರಣ ಮಾಡಲು ಮುಂದಾದರೆ ರೈತರ ಹಕ್ಕು ನಿರ್ಬಂಧಿಸಿದಂತಾಗುತ್ತದೆ. ಹಾಗಿದ್ದರೂ ನಿಷೇಧಿತ ಕೀಟನಾಶಕ ಹಾಗೂ ಕಳೆನಾಶಕಗಳನ್ಮು ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಜನರಿಗೆ ಯಾವುದೇ ವಿಚಾರದಲ್ಲಿ ನಿರ್ಬಂಧ ಹೇರುವ ಬದಲು ಸೂಕ್ತ ತಿಳುವಳಿಕೆ ಮೂಡಿಸಿದರೆ ಹಂತ ಹಂತವಾಗಿ ಬದಲಾವಣೆ ತರಬಹುದು. ಸಂಸದನಾಗಿ ಜನ ಆಯ್ಕೆ ಮಾಡಿದ್ದಲ್ಲಿ ಈ ಎಲ್ಲದರ ಕುರಿತೂ ಕೇಂದ್ರದಿಂದ ಸಿಗಬಹುದಾದ ಎಲ್ಲಾ ನೆರವು ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಕೃಷ್ಣಭೈರೇಗೌಡ ಭರವಸೆ ನೀಡಿದರು.