ಬೆಂಗಳೂರು: ಕೋವಿಡ್ ನಡುವೆಯೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ನಡೆಯಲಿದೆ. ಆದ್ರೆ, ಹೆಚ್ಚು ಮಳಿಗೆಗಳಿಗೆ ಅವಕಾಶ ಇಲ್ಲದೆ, ಕೇವಲ ಕೃಷಿ ವಿದ್ಯಾಲಯದ ಮಳಿಗೆಗಳು ಮಾತ್ರ ಪ್ರದರ್ಶನದಲ್ಲಿರಲಿವೆ.
ದಿನವೊಂದಕ್ಕೆ 200 ಜನರಿಗೆ ಮಾತ್ರ ಕೃಷಿ ಮೇಳ ಭೇಟಿಗೆ ಅವಕಾಶ ಇರಲಿದೆ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಜನಪ್ರತಿನಿಧಿಗಳ ಬದಲು, ಈ ಬಾರಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಉಪ ಮಹಾನಿರ್ದೇಶಕರಾದ ಡಾ. ಎ ಕೆ ಸಿಂಗ್ ಅವರು ಆನ್ಲೈನ್ ಮೂಲಕ ಉದ್ಘಾಟಿಸಲಿದ್ದಾರೆ. ಕೋವಿಡ್ ಮುನ್ನೆಚ್ಚರಿಕೆಗೆ ವೈದ್ಯರ ತಂಡ ಹಾಗೂ ಥರ್ಮಲ್ ಸ್ಕ್ರೀನಿಂಗ್ ಇರಲಿದೆ. 14 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಪ್ರವೇಶ ಇರುವುದಿಲ್ಲ. ಕೃಷಿ ವಿವಿ ಈ ಬಾರಿ ಮೂರು ಹೊಸ ತಳಿ ಹಾಗೂ ಏಳು ಹೊಸ ತಂತ್ರಜ್ಞಾನ ಬಿಡುಗಡೆ ಮಾಡಲಿದೆ.
ಮೂರು ಹೊಸ ತಳಿಗಳು
1)ನೆಲಗಡಲೆ - ಜಿಕೆವಿಕೆ -27
2)ಅಲಸಂದೆ - ಕೆ.ಸಿ- 8
3)ಅಲಸಂದೆ - ಎಂಎಫ್ಸಿ- 09-3
ಬಿಡುಗಡೆಯಾದ ಹೊಸ ತಂತ್ರಜ್ಞಾನಗಳು
ಬೆಳೆ ಅಭಿವೃದ್ಧಿ -1
ಬೆಳೆ ಉತ್ಪಾದನೆ- 8
ಬೆಳೆ ಸಂರಕ್ಷಣೆ- 7 ಹಾಗೂ
ಕೃಷಿ ಇಂಜಿನಿಯರಿಂಗ್ ಗೆ 1 ತಂತ್ರಜ್ಞಾನ ಪರಿಚಯಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಎಸ್. ರಾಜೇಂದ್ರ ಪ್ರಸಾದ್, ಕೋವಿಡ್ ಹಿನ್ನೆಲೆ ದಿನವೊಂದಕ್ಕೆ ಇನ್ನೂರು ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಉಳಿದೆಡೆ ಜಿಲ್ಲಾ ಕೇಂದ್ರಗಳಿಗೆ ರೈತರು ಭೇಟಿ ನೀಡಿ ಆನ್ಲೈನ್ ಕೃಷಿಮೇಳದಲ್ಲಿ ಭಾಗವಹಿಸಬೇಕೆಂದು ಕರೆ ನೀಡಲಾಗಿದೆ ಎಂದರು.
ಕೋವಿಡ್ ನಡುವೆಯೂ 292 ಮಿಲಿಯನ್ ಟನ್ ನಷ್ಟು ರೈತರು ಆಹಾರ ಉತ್ಪಾದನೆ ಮಾಡಿದ್ದಾರೆ. ಇದಕ್ಕೆ ವಿಜ್ಞಾನಿಗಳು, ತಂತ್ರಜ್ಞಾನದ ಕೊಡುಗೆಯೂ ಇದೆ. ಹೀಗಾಗಿ ಈ ಬಾರಿ 17 ಹೊಸ ತಂತ್ರಜ್ಞಾನಗಳನ್ನು ಹಾಗೂ 3 ಹೊಸ ತಳಿಯನ್ನು ಜಿಕೆವಿಕೆ ಬಿಡುಗಡೆ ಮಾಡಲಿದೆ. ಈ ಬಾರಿ 20 ರಿಂದ 25 ವಿಶ್ವವಿದ್ಯಾಲಯದ ಮಳಿಗೆಗಳು ಪ್ರದರ್ಶನದಲ್ಲಿರಲಿವೆ. ಬೆಳೆಗಳ ಮಾಹಿತಿಯನ್ನು ಮೈದಾನದಲ್ಲೇ ಕೊಡಲಾಗುವುದು ಎಂದ ಅವರು, ಇದರ ಆನ್ಲೈನ್ ಪ್ರಸಾರ ಇರಲಿದೆ ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ರೈತರು ಕೃಷಿ ಮಾಡಬೇಕಾದರೆ ಕೆಲವೊಂದು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಕಳೆ ಕೀಳುವಾಗ ಎಲ್ಲರೂ ಒಟ್ಟು ಸೇರಬಾರದು. ಮಷಿನರಿಗಳನ್ನು ಒಬ್ಬರಿಂದ ಇನ್ನೊಬ್ಬರು ಬಳಕೆ ಮಾಡುವಾಗ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿಯೂ ಇರಲಿದೆ. ರೈತರ ಗೊಂದಲಗಳಿಗೆ ಪರಿಹಾರ ನೀಡಲು 25 ತಜ್ಞರು ಉತ್ತರಿಸಲಿದ್ದಾರೆ ಎಂದರು.
ಕೃಷಿ ಸಾಧಕರಿಗೆ ಪ್ರಶಸ್ತಿ: ಕೃಷಿ ಸಾಧಕರಿಗೆ ರಾಜ್ಯ ಮಟ್ಟದ 6 ಪ್ರಶಸ್ತಿ, ಜಿಲ್ಲಾ ಮಟ್ಟದಲ್ಲಿ ಪ್ರಗತಿಪರ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ತಾಲೂಕು ಮಟ್ಟದಲ್ಲಿ ಯುವ ರೈತರ ಪ್ರಶಸ್ತಿ ಕೊಡಲಾಗುತ್ತಿದೆ.