ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆಯಡಿ (ಕೆಪಿಎಂಇ) ಆಸ್ಪತ್ರೆಗಳ ನೋಂದಣಿ ಹಾಗೂ ನವೀಕರಣವನ್ನು ಸರಳೀಕರಣ ಮಾಡಲಾಗಿದೆ. ಇನ್ನು ಮುಂದೆ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್ ಮೂಲಕವೇ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಕೆಪಿಎಂಇ ಹಾಗೂ ಪ್ರಸವ ಪೂರ್ವ ಮತ್ತು ಗರ್ಭಪೂರ್ವ ಲಿಂಗ ಪತ್ತೆ ಕಾಯ್ದೆಯಡಿ (ಪಿಸಿಪಿಎನ್ಡಿಟಿ) ವ್ಯವಹಾರ ಸರಳೀಕರಣ ಮಾಡಲಾಗುತ್ತಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ಕಳೆದ ಸೆ.9 ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಿರಪೇಕ್ಷಣಾ ಪತ್ರ, ನೋಂದಣಿ, ಪರವಾನಗಿ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗಳು ಆನ್‌ಲೈನ್‌ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಿದ್ದು, ನಿಗದಿತ ಶುಲ್ಕ ಪಾವತಿಸಲು ಅವಕಾಶ ನೀಡಲಾಗುತ್ತದೆ. ಆನ್‌ಲೈನ್ ಮೂಲಕವೇ ದಸ್ತಾವೇಜುಗಳ ಪರಿಶೀಲಿಸಿ, ಪ್ರಕಟಿಸಲಾಗುತ್ತದೆ. ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಪೋರ್ಟಲ್ ನಲ್ಲಿ ಟ್ರ್ಯಾಕ್ ಮಾಡುವ ಅವಕಾಶವಿದೆ. ಆನ್‌ಲೈನ್ ಮೂಲಕವೇ ಅನುಮೋದನೆಯ ಪತ್ರ ಅಥವಾ ತಪಾಸಣಾ ವರದಿಗಳನ್ನು ಪಡೆದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.