ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್( ಕೆಪಿಎಲ್) ಕ್ರೀಕೆಟ್ ಮ್ಯಾಚ್ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ನ್ಯಾಯಲಯದ ಅನುಮತಿ ಪಡೆದು ಸಿಸಿಬಿ ಅಧಿಕಾರಿಗಳು ದೊಮ್ಮಲೂರು ಬಳಿಯ ಸುಧೀಂದ್ರ ಶಿಂಧೆ ಮನೆ ಮೇಲೆ ದಾಳಿ ನಡೆಸಿ ಕೆಲ ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದು. ಸತತವಾಗಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ತನಿಖೆ ನಡೆಸುತ್ತಿದ್ದರು. ಪ್ರಕರಣದಲ್ಲಿ ಸುಧೀಂದ್ರ ಶಿಂಧೆ ಪಾತ್ರ ಇರುವುದು ದೃಢ ಪಟ್ಟ ಹಿನ್ನಲೆ ಸದ್ಯ ಬಂಧಿಸಲಾಗಿದೆ.
ಈಗಾಗಲೇ ಕೆಪಿಎಲ್ ಹಗರಣದಲ್ಲಿ ಬಂಧಿತನಾಗಿದ್ದ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಕ್ ತಾರ್ ಹಾಗೂ ಇತರೆ ಆಟಗಾರರು ಸುಧೀಂದ್ರ ಶಿಂಧೆ ಪಾತ್ರದ ಕುರಿತು ಕೆಲ ಮಾಹಿತಿ ಬಿಚ್ಚಿಟ್ಟಿದ್ದರು. ಈ ಕುರಿತು ಖಚಿತ ದಾಖಲೆಗಳ ಆಧಾರದ ಮೇಲೆ ಬಂಧನ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿರುವ ಶಿಂಧೆ ಅನೇಕ ಆಟಗಾರರ ಜೊತೆ ಸಂಪರ್ಕ ಹೊಂದಿದ್ದರು. ಹೀಗಾಗಿ ಕೆಪಿಎಲ್ ಬಹು ದೊಡ್ಡ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದರು. ಸುಧೀಂದ್ರ ಶಿಂಧೆ ಕೋಚ್ ಕೂಡ ಆಗಿರುವ ಕಾರಣ ಇನ್ನಷ್ಟು ಇವರ ಜೊತೆ ಪಳಗಿದ ಆಟಗಾರರು ಭಾಗಿಯಾರುವ ಶಂಕೆ ಮೇರೆಗೆ ತನಿಖೆ ಮುಂದುವರೆದಿದೆ.