ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣವನ್ನ ಸಿಸಿಬಿ ಬಯಲಿಗೆ ಎಳೆದು ಪ್ರತಿಷ್ಠಿತ ಆಟಗಾರರನ್ನ ಬಂಧಿಸಿದೆ. ಈ ಕುರಿತು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, 2019ರ ಕೆಪಿಎಲ್ ಫೈನಲ್ ಪಂದ್ಯವೇ ಫಿಕ್ಸ್ ಆಗಿದೆ. ಇದು ಬಳ್ಳಾರಿ ಟಸ್ಕರ್ಸ್ ಹಾಗೂ ಹುಬ್ಬಳ್ಳಿ ಟೈಗರಸ್ ನಡುವೆ ನಡೆದಿದ್ದ ಪಂದ್ಯ. ಈ ಪಂದ್ಯದಲ್ಲಿ 8 ರನ್ಗಳಿಂದ ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ ಆಗಿತ್ತು.
ಬಳ್ಳಾರಿ ಟಸ್ಕರ್ಸ್ ನಾಯಕ ಸಿ.ಎಂ.ಗೌತಮ್ ನಿಧಾನಗತಿಯ ಬ್ಯಾಂಟಿಂಗ್ ಮಾಡಲು ಪಂದ್ಯ ಫಿಕ್ಸ್ ಮಾಡಿಕೊಂಡಿದ್ದರು. ಹಾಗೆಯೇ ಟೀಂನಲ್ಲಿದ್ದ ಅಬ್ರಾರ್ ಖಾಜಿ ಒಂದು ಓವರ್ಗೆ 10 ರನ್ ಮಾಡಲು ಫಿಕ್ಸ್ ಮಾಡಿಕೊಂಡಿದ್ದರು. ಖಚಿತ ಸಾಕ್ಷ್ಯಗಳ ಆಧಾರದಲ್ಲಿ ಇಬ್ಬರನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕಸ್ಟಡಿಗೆ ಪಡೆಯಲಿದ್ದೇವೆ ಎಂದರು.
ಹಾಗೆಯೇ ಇವರು ಬೇರೆ ಆಟಗಾರರನ್ನ ಕೂಡ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿಸಿರುವ ಗುಮಾನಿ ಇದೆ. ಸದ್ಯ 4 ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಲಾಗಿದೆ. 2019ರ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ನಲ್ಲಿ ಇನ್ನು ಯಾರಾದರು ಭಾಗಿಯಾಗಿದ್ದರಾ ಅನ್ನೋದ್ರ ಬಗ್ಗೆ ತನಿಖೆ ಮುಂದುವರೆದಿದೆ. ಪ್ರಮುಖ ಸಾಕ್ಷ್ಯಗಳ ಕಲೆಹಾಕಿ ಇದೀಗ ಆರೋಪಿಗಳ ಬಂಧನ ಮಾಡಲಾಗಿದೆ. ಇನ್ನು ಸದ್ಯದ ಮಾಹಿತಿ ಪ್ರಕಾರ 5 ಬುಕ್ಕಿಗಳ ಪಾತ್ರ ಇರೋದು ತಿಳಿದು ಬಂದಿದೆ. ಬುಕ್ಕಿಗಳ ಜೊತೆ ಅನೇಕ ಆಟಗಾರರು ಭಾಗಿಯಾಗಿರುವ ಮಾಹಿತಿ ಇದೆ. ಬುಕ್ಕಿಗಳು ಅಂತಾರಾಷ್ಟ್ರೀಯ ಮಟ್ಟದವರಾಗಿದ್ದಾರೆ. ಕೆಲವರು ವಿದೇಶಕ್ಕೆ ಹಾರಿದ್ದಾರೆ. ಕಾನೂನು ಪ್ರಕಾರ ಅವರ ಬಂಧನಕ್ಕೆ ಅಗತ್ಯವಿರುವ ಕ್ರಮಗಳನ್ನು ಮಾಡಿಕೊಳ್ಳಲಾಗ್ತಿದೆ. ಬುಕ್ಕಿಗಳನ್ನ ಬಂಧಿಸಿದಾಗ ಇನ್ನಷ್ಟು ಪ್ರತಿಷ್ಠಿತ ಆಟಗಾರರು ಬಂಧನವಾಗುವ ಸಾದ್ಯತೆ ಇದೆ ಎಂದು ಸಿಸಿಬಿ ಸಂದೀಪ್ ಪಾಟೀಲ್ ಹೇಳಿದರು.
ಹಿನ್ನೆಲೆ: ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ.ಗೌತಮ್, ಪ್ರಸಕ್ತ ಸಾಲಿನಲ್ಲಿ ಗೋವಾ ಪರ ಆಡುತ್ತಿದ್ದರು. 2012-13ನೇ ಸಾಲಿನ ರಣಜಿ ಋತುವಿನಲ್ಲಿ ರಾಜ್ಯದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೇ ಆಟಗಾರ. ಅದೇ ಪ್ರದರ್ಶನದ ಆಧಾರದಲ್ಲಿ ಇಂಡಿಯಾ ಎ ತಂಡವನ್ನೂ ಪ್ರತಿನಿಧಿಸಿದ್ದ ಗೌತಮ್. ಅಬ್ರಾರ್ ಖಾಜಿ ಆರ್ಸಿಬಿ ಪರ ಒಂದು ಪಂದ್ಯವನ್ನಾಡಿದ್ದ. 2018-19ನೇ ಸಾಲಿನ ರಣಜಿ ಟ್ರೋಫಿಯಲ್ಲಿ ನಾಗಾಲ್ಯಾಂಡ್ ಪರ ಕಣಕ್ಕಿಳಿದಿದ್ದ ಆಟಗಾರ. ನಾಗಾಲ್ಯಾಂಡ್ ಪರ ಅತೀ ಹೆಚ್ಚು ರನ್ ಹಾಗೂ ಅತೀ ಹೆಚ್ಚು ವಿಕೆಟ್ ಪಡೆದಿದ್ದ. ಮುಂಬರುವ ರಣಜಿ ಟ್ರೋಫಿಯಲ್ಲಿ ಮಿಜೋರಾಂ ಪರ ಕಣಕ್ಕಿಳಿಯಲು ರೆಡಿಯಾಗಿದ್ದ.
ಐಪಿಎಲ್ಗೂ ನಂಟು ಶಂಕೆ: ಕೆಪಿಎಲ್ ಆದ ರೀತಿ ಐಪಿಎಲ್ ಆಟದಲ್ಲಿ ಕೂಡ ಕ್ರಿಕೆಟ್ ಬೆಟ್ಟಿಂಗ್ ನಡೆದಿರುವ ಶಂಕೆ ಇದ್ದು, ಸದ್ಯ ಸಿಸಿಬಿ ಎಲ್ಲಾ ರೀತಿಯಲ್ಲಿ ತನಿಖೆ ಮುಂದುವರೆಸಿದೆ.