ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ಸಿಲುಕಿರುವ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್ ವಿದೇಶಿ ಆಟಗಾರರ ಜೊತೆ ಸಂಪರ್ಕ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಹಿನ್ನೆಲೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಎರಡು ತಂಡ ದೆಹಲಿಗೆ ತೆರಳಿ ಕೆಲ ವಿದೇಶಿ ಆಟಗಾರರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಸಿಸಿಬಿಯಿಂದ ಬಂಧಿತನಾಗಿದ್ದ ಅಲಿ ಅಶ್ಫಾಕ್ ಒಡೆತನದಲ್ಲಿ, ಕೇರಳ ಕಿಂಗ್ಸ್ ಎನ್ನುವ ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸುವ ಮತ್ತೊಂದು ತಂಡ ಇದ್ದು, ಅಬುಧಾಭಿಯಲ್ಲಿ ನಡೆಯುವ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುತ್ತಾ ಇತ್ತು. ಆದರೆ ಅಲಿ ಅಶ್ಫಾಕ್ ಬಂಧನದ ಬಳಿಕ, ಕೇರಳ ಕಿಂಗ್ಸ್ ತಂಡವನ್ನು ಟೂರ್ನಿಯಿಂದ ಕೈಬಿಡಲು ಆಯೋಜಕರು ಚಿಂತನೆ ನಡೆಸಿದ್ದಾರೆ. ಹೀಗಾಗಿ ಕೇರಳ ಕಿಂಗ್ಸ್ ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ಸಿಗೋದು ಅನುಮಾನವಿದೆ. ಅಲ್ಲದೆ ಅಶ್ಫಾಕ್ ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ತನ್ನ ಬಲೆಗೆ ಬೀಳಿಸಲು ಪ್ರಯತ್ನಿಸಿದ್ದ ಎನ್ನುವ ಅನುಮಾನವೂ ಈಗ ಶುರುವಾಗಿದೆ. ಹೀಗಾಗಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕ ಕೂಡ ಅಶ್ಫಾಕ್ ವಿಚಾರಣೆ ನಡೆಸುತ್ತಿದೆ.