ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿಂತೆ ತನಿಖೆ ಚುರುಕುಗೊಂಡಿದ್ದು, ಬಿಜಾಪುರ ಬುಲ್ಸ್ ಟೀಂ ಮಾಲೀಕ ಕಿರಣ್ ಕಟ್ಟಿಮನಿ ವಿಚಾರಣೆಗೆ ಹಾಜರಾಗಿದ್ದಾರೆ.
ಕೆಪಿಎಲ್ ತಂಡದಲ್ಲಿ ಆಟವಾಡಿದ್ದ ಒಟ್ಟು 7 ತಂಡಗಳಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಸದ್ಯ ಬಿಜಾಪುರ ಬುಲ್ಸ್ ಟೀಂ ಮಾಲೀಕನಾಗಿರುವ ಕಿರಣ್ ಕಟ್ಟಿಮನಿ, ಸಿಸಿಬಿ ವಿಚಾರಣೆ ಎದುರಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕಟ್ಟಿಮನಿ, ನಮ್ಮ ತಂಡದಲ್ಲಿ ಹಿಂದುಳಿದ ಹುಡುಗರನ್ನ ಕರೆ ತಂದು ಅವರಿಗೆ ಒಂದು ಒಳ್ಳೆ ಭವಿಷ್ಯ ಕೊಡಿಸೋದು ನನ್ನ ಉದ್ದೇಶ. ಕೆಲ ಹಿರಿಯರು ಬೆಟ್ಟಿಂಗ್ ನಂತಹ ಕೃತ್ಯ ಎಸಗಿದ್ದಾರೆ ಅವೆಲ್ಲವನ್ನು ಸಿಸಿಬಿ ಬಯಲಿಗೆಳಿದಿದೆ ಎಂದರು.
ಸದ್ಯ ನನ್ನಬಳಿ ಕೆಲ ಫೈನಾನ್ಸ್ ವಿಷಯದ ಬಗ್ಗೆ ಹಾಗೂ ಕೆಲ ದಾಖಲೆಗಳ ಕುರಿತು ಮಾಹಿತಿ ಕೇಳಿದ್ದಾರೆ. ನಮ್ಮ ಆಟಗಾರರು ಆ ರೀತಿ ಮಾಡಿದ್ದರೆ ಒದ್ದು ಬುದ್ದಿ ಹೇಳ್ತಿದ್ದೆ. ನಮ್ಮ ಟೀಂನಲ್ಲಿ ಯಾರೂ ಆ ತರಹ ಮಾಡಿಲ್ಲ. ಎಲ್ಲಾ ಫ್ರಾಂಚೈಸಿಗಳ ಮಾಹಿತಿ ಕೇಳಿದ್ದರು. ಅದರ ಬಗ್ಗೆ ದಾಖಲಾತಿ ಒದಗಿಸಿದ್ದೇನೆ ಎಂದು ಮಾಹಿತಿ ನೀಡಿದರು.
ನನ್ನ ಟೀಂ ನಲ್ಲಿರುವವರು ಬೆಟ್ಟಿಂಗ್ ನಡೆಸೋ ಚಾನ್ಸೇ ಇಲ್ಲ. ಎಲ್ಲಾ ಮಾಲೀಕರಿಗೆ ನೋಟಿಸ್ ಕೊಟ್ಟ ರೀತಿ ನನಗೂ ಕೊಟ್ಟಿದ್ದಾರೆ. ಕೆಪಿಎಲ್ ಕೂಡ ಸ್ವಚ್ಛ ಭಾರತ್ ಹಾಗೆ ಕ್ಲೀನ್ ಆಗಬೇಕು ಎಂದರು.