ಬೆಂಗಳೂರು: ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಾಕಷ್ಟು ಉತ್ತಮ ಅವಕಾಶಗಳಿದ್ದು ಮೂರರಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಉಪಚುನಾವಣೆ ಸಂಬಂಧ ಸುಧೀರ್ಘ ಚರ್ಚೆ ನಡೆದಿದೆ. ಯಾವ ರೀತಿ ಚುನಾವಣೆ ನಡೆಸಬೇಕು, ಯಾವ ತಂತ್ರಗಾರಿಕೆ ಮಾಡಬೇಕೆಂದು ಚರ್ಚಿಸಲಾಯ್ತು. ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಭ್ರಷ್ಟ ಸರ್ಕಾರವನ್ನ ಬುಡಸಮೇತ ಕೀಳಬೇಕು. ಹೀಗಾಗಿ ಚುನಾವಣೆಯಲ್ಲಿ ಗೆಲ್ಲಬೇಕಿದೆ ಎಂದರು.
ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಮಸ್ಕಿಗೆ ಬಸನಗೌಡ ತುರುವಿಹಾಳ, ಬಸವಕಲ್ಯಾಣದಲ್ಲಿ ಮಲ್ಲಮ್ಮಗೆ ಟಿಕೆಟ್ ನೀಡಲಾಗಿದೆ. ಅವರನ್ನ ಗೆಲ್ಲಿಸುವ ಬಗ್ಗೆ ತಂತ್ರಗಾರಿಕೆ ನಡೆಸಿದ್ದೇವೆ. ಬೆಳಗಾವಿ ಅಭ್ಯರ್ಥಿಯ ಆಯ್ಕೆಯಾಗಿದ್ದು, ಅವರ ಹೆಸರನ್ನ ಕಾಯ್ದಿರಿಸಲಾಗಿದೆ. ನಮ್ಮ ಪಕ್ಷದಲ್ಲಿ ಗೆಲ್ಲುವ ಹಲವರು ಇದ್ದಾರೆ. ಒಮ್ಮತದಿಂದ ಸೂಚಿಸಿದ್ದರಿಂದ ಅವರ ಆಯ್ಕೆಯಾಗಿದೆ ಎಂದು ಖಂಡ್ರೆ ಹೇಳಿದರು.
ಈ ಸರ್ಕಾರದ ಹನಿಮೂನ್ ಪಿರಿಯಡ್ ಮುಗಿದಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ರೈತ, ಕಾರ್ಮಿಕ ವಿರೋಧಿ ಕಾಯ್ದೆ ತಂದಿದ್ದಾರೆ. ನಮಗೆ ಸಂಪೂರ್ಣ ಭರವಸೆಯಿದೆ ಎಂದರು.