ಬೆಂಗಳೂರು: ಕಾರವಾರ, ನಿಪ್ಪಾಣಿ, ಬೆಳಗಾವಿ ನಮ್ಮ ಅವಿಭಾಜ್ಯ ಅಂಗ. ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಜತ್ತ ಹಾಗೂ ಸೊಲ್ಲಾಪುರ ಎಲ್ಲವೂ ನಮಗೆ ಬರಬೇಕು. ಮಹಾಜನ್ ವರದಿಯಂತೆ ನಮಗೆ ಬರಬೇಕು. ಅಜಿತ್ ಪವಾರ್ ಹೇಳಿಕೆ ಖಂಡನೀಯವಾದುದು. ಇಂತಹ ತೆವಲಿನ ಹೇಳಿಕೆಗಳನ್ನು ನೀಡುವುದನ್ನು ಅವರು ಬಿಡಬೇಕು ಎಂದು ಆಗ್ರಹಿಸಿದರು.
ಬಸವಕಲ್ಯಾಣಕ್ಕೆ ಬಿ.ವೈ. ವಿಜಯೇಂದ್ರ ಎಂಟ್ರಿ ವಿಚಾರ ಮಾತನಾಡಿ, ಅದು ಶರಣರ ನಾಡು. ಯಾರು ಬಂದ್ರೂ ಏನೂ ಮಾಡೋಕೆ ಆಗಲ್ಲ. ಕಲ್ಯಾಣ ಕರ್ನಾಟಕ ಮಾಡಿದ್ರು ಏನಾಗಿದೆ? ಯಾವ ಕಾರ್ಯಕ್ರಮ ಅಲ್ಲಿ ಜಾರಿಗೆ ತಂದಿದ್ದಾರೆ. ದೊಡ್ಡ ಮಟ್ಟದ ನೀರಾವರಿ ಯೋಜನೆ ತಂದಿಲ್ಲ. ಶಿಕ್ಷಣ ಕ್ಷೇತ್ರದ ಖಾಲಿ ಸ್ಥಾನ ತುಂಬಿಲ್ಲ. ಉದ್ಯೋಗ ಭರ್ತಿ ಮಾಡುವುದು ಆಗಿಲ್ಲ. ಬರೀ ಬೂಟಾಟಿಕೆ ಮಾಡಿಕೊಂಡೇ ಹೋಗಿದ್ದಾರೆ ಎಂದು ದೂರಿದ್ರು.
ಲಿಂಗಾಯತ ಅಭಿವೃದ್ಧಿ ನಿಗಮ ಘೋಷಣೆ ವಿಚಾರ ಮಾತನಾಡಿ, ನಾನು ವೀರಶೈವ ನಿಗಮದಲ್ಲಿದ್ದೇನೆ. ಸಮುದಾಯದ ಬಡವರಿಗೆ ಸಮಸ್ಯೆಯಿತ್ತು. ಹಿಂದೆಯೇ ನಿಗಮ ಘೋಷಣೆ ಮಾಡಬೇಕಿತ್ತು. ಆದರೆ ಈಗ ಘೋಷಣೆ ಮಾಡಿದ್ದಾರೆ. ಉಪಚುನಾವಣೆ ಬಂದಿದೆ ಅಂತ ಮಾಡಿದ್ದಾರೆ. ಅನುದಾನವನ್ನ ಏನಾದ್ರೂ ಘೋಷಣೆ ಮಾಡಿದ್ದಾರಾ? ಮೊದಲು ಅನುದಾನ ಘೋಷಣೆ ಮಾಡಲಿ. ಐದು ಸಾವಿರ ಕೋಟಿ ಹಣ ಅಲ್ಲಿ ಇಡಲಿ ಎಂದು ಒತ್ತಾಯಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಟಿಕೆಟ್ ವಿಚಾರ ಮಾತನಾಡಿ, ನಾರಾಯಣ್ ರಾವ್ ಕುಟುಂಬದ ಜೊತೆ ಮಾತನಾಡ್ತೇವೆ. ಅವರ ಒಪ್ಪಿಗೆ ಪಡೆದೇ ಅಭ್ಯರ್ಥಿ ಹಾಕ್ತೇವೆ. ಒಮ್ಮತದ ಅಭ್ಯರ್ಥಿಯನ್ನ ನಾವು ಆಯ್ಕೆ ಮಾಡ್ತೇವೆ. ಈಗಾಗಲೇ ಹಲವು ಸಭೆಗಳಲ್ಲಿ ಮಾಡಿದ್ದೇವೆ. ನ.28 ರಂದು ಮತ್ತೊಂದು ಸಭೆ ನಡೆಸುತ್ತೇವೆ. ನಾರಾಯಣರಾವ್ ಹಲವು ಜನೋಪಕಾರಿ ಕಾರ್ಯಗಳನ್ನು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಹಾರ ವಿತರಿಸಿದ್ದಾರೆ. ಆದ್ರೆ ಅದೇ ಕೋವಿಡ್ಗೆ ಅವರೇ ಬಲಿಯಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ರು.
ಅನುಭವ ಮಂಟಪಕ್ಕೆ ಅಡಿಪಾಯ ಹಾಕಿದ್ದೇವೆ. ನಾವಿದ್ದಾಗ ಹೆಚ್ಚಿನ ಅನುದಾನ ಅಲ್ಲಿಗೆ ಕೊಟ್ಟಿದ್ದೇವೆ. ನಮ್ಮ ಸಾಧನೆ, ಬಿಜೆಪಿ ವೈಫಲ್ಯ ಜನರ ಮುಂದಿಡುತ್ತೇವೆ ಎಂದರು.