ಬೆಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬ ಹಾಗೂ ಗಾಯಾಳುಗಳ ಭೇಟಿಗೆ ಪೊಲೀಸರು ಅವಕಾಶ ಕೊಟ್ಟಿಲ್ಲ. ಆ ಮೂಲಕ ಬಿಜೆಪಿ ಸರ್ಕಾರ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ಸಾಂತ್ವನ ನೀಡುವ ಉದ್ದೇಶದಿಂದ ನಮ್ಮ ನಾಯಕರು ತೆರಳಿದ್ದರು. ಅವರನ್ನು ಮಂಗಳೂರಿನಲ್ಲಿ ಪೊಲೀಸರು ತಡೆದಿದ್ದು, ಈ ಮೂಲಕ ಸರ್ಕಾರ ಜನರನ್ನು ಹೆದರಿಸೋಕೆ ಮುಂದಾಗಿದೆ ಎಂದರು.
ಬಂದೂಕು, ಲಾಠಿಯಿಂದ ಹೋರಾಟಗಾರರನ್ನು ನಿಗ್ರಹಿಸುವುದಕ್ಕೆ ಬಿಜೆಪಿಯವರು ಹೊರಟಿದ್ದಾರೆ. ಇಬ್ಬರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಹತ್ಯೆಯ ವಿಚಾರವನ್ನು 8 ಗಂಟೆಯವರೆಗೆ ಮುಚ್ಚಿಡಲಾಗಿದೆ. ಇದನ್ನು ಗಮನಿಸಿದರೆ ಏನನ್ನಬೇಕು ಎಂದು ಪ್ರಶ್ನಿಸಿದರು. ಸರ್ಕಾರ ಹಾಗೂ ಪೊಲೀಸರು ಹೊಂದಾಣಿಕೆ ಮಾಡ್ಕೊಂಡು ಈ ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ಸನ್ನು ದೇಶದ್ರೋಹಿ ಪಕ್ಷ ಅಂತಾರೆ. ಆದರೆ ಬಿಜೆಪಿ ನಕಲಿ ದೇಶದ್ರೋಹಿಗಳ ಪಕ್ಷವಾಗಿದ್ದು, ಇದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಅರ್ಥಮಾಡಿಕೊಳ್ಳಬೇಕು ಎಂದು ನಳೀನ್ ಕುಮಾರ್ ಕಟೀಲ್ಗೆ ಟಾಂಗ್ ನೀಡಿದರು.
ದೇಶದಲ್ಲಿ ಎಲ್ಲಾ ಧರ್ಮೀಯರಿಗೆ ಬದುಕುವ ಹಕ್ಕಿದೆ. ಬದುಕುವ ಹಕ್ಕನ್ನೇ ಕಿತ್ತುಕೊಳ್ಳಲು ಹೊರಟಿದ್ದು, ಭಯ ಹುಟ್ಟಿಸೋಕೆ ಪೌರತ್ವ ಕಾಯ್ದೆ ತಂದಿದ್ದಾರೆ. ಇದು ಭಸ್ಮಾಸುರ ಪ್ರವೃತ್ತಿಯನ್ನು ತೋರಿಸುತ್ತಿದ್ದು, ಅವರ ಅವನತಿಯ ಆರಂಭಕ್ಕೆ ಕಾರಣವಾಗಿದೆ ಎಂದು ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದರು.