ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರನ್ನಾಗಿ ಬಿ ಆರ್ ನಾಯ್ಡು ನೇಮಿಸಲು ಕಾಂಗ್ರೆಸ್ ಪಕ್ಷ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ನಿರ್ಧಾರ ಕೈಗೊಂಡು ಅದನ್ನ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದಾರೆ. ಶೀಘ್ರವೇ ಪಕ್ಷದ ರಾಷ್ಟ್ರೀಯ ನಾಯಕರು ಅಧಿಕೃತ ಆದೇಶ ಹೊರಡಿಸಲಿದ್ದಾರೆ.
ನಟರಾಜ್ ಗೌಡ ಸ್ಥಾನಕ್ಕೆ ಬಿ ಆರ್ ನಾಯ್ಡು : ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿದ್ದ ನಟರಾಜಗೌಡ ಸ್ಥಾನಕ್ಕೆ ಬಿ ಆರ್ ನಾಯ್ಡು ನೇಮಕಗೊಂಡಿದ್ದಾರೆ. ಕಳೆದ ಜೂನ್ನಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ ಏಳು ಸ್ಥಾನಗಳ ಪೈಕಿ ಎರಡು ಸ್ಥಾನ ಕಾಂಗ್ರೆಸ್ ಪಾಲಿಗೆ ಲಭಿಸಿತ್ತು.
ಆ ಸಂದರ್ಭ ಕಾಂಗ್ರೆಸ್ನಿಂದ ವಿಧಾನಪರಿಷತ್ತಿಗೆ ಪ್ರವೇಶಿಸಲು ನಟರಾಜ್ ಗೌಡ ಸೇರಿದಂತೆ ಹಲವು ಕೆಪಿಸಿಸಿ ಪದಾಧಿಕಾರಿಗಳು ಸಾಕಷ್ಟು ದೊಡ್ಡ ಮಟ್ಟದ ಪ್ರಯತ್ನ ನಡೆಸಿದ್ದರು. ಆದರೆ, ಈ ಪ್ರಯತ್ನದಲ್ಲಿ ಆದ ಹಿನ್ನಡೆಗೆ ಬೇಸರಗೊಂಡಿದ್ದ ನಟರಾಜ್ ಗೌಡ, ಪಕ್ಷದ ಕಚೇರಿಗೆ ಆಗಮಿಸುವುದನ್ನು ನಿಲ್ಲಿಸಿದ್ದರು.
ಅನಾರೋಗ್ಯದ ನೆಪವೊಡ್ಡಿ ಪಕ್ಷದ ಕಚೇರಿಯತ್ತ ಮುಖ ಮಾಡಿರಲಿಲ್ಲ. ಇದೀಗ ಅಂತಿಮವಾಗಿ ಅವರ ಸ್ಥಾನಕ್ಕೆ ಬಿ ಆರ್ ನಾಯ್ಡುರನ್ನು ನೇಮಿಸಲಾಗಿದೆ.