ಬೆಂಗಳೂರು : ಉಡುಪಿ ಜಿಲ್ಲೆಯ ಹಿರಿಯಡ್ಕದ ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅದನ್ನು ತಡೆಯುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಹಮದ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು, ನಾನು ಇತ್ತೀಚೆಗೆ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದೆ. ಆಗ ಅಲ್ಲಿನ ಜಿಲ್ಲಾ ಮುಖಂಡರು, ಸಾರ್ವಜನಿಕರು, ಪತ್ರಕರ್ತರು ನನ್ನನ್ನು ಭೇಟಿಯಾಗಿದ್ದರು. ಜಿಲ್ಲೆಯ ಹಿರಿಯಡ್ಕ ಸ್ವರ್ಣಾ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ಹಾಗೂ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ತಂದಿರುತ್ತಾರೆ.
ಜಿಲ್ಲಾಧಿಕಾರಿಗಳು ಸೂಚಿಸಿದ ಷರತ್ತುಗಳನ್ನು ಉಲ್ಲಂಘಿಸಿ ಬಜೆ ಅಣೆಕಟ್ಟಿನಿಂದ ಮಾಣೈ ಹಾಗೂ ಮಾಣೈಯಿಂದ ಶಿರೂರಿನವರೆಗೆ ಹೂಳೆತ್ತುವ ನೆಪದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ. ಇದರಿಂದಾಗಿ ನೂರಾರು ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಲಾಕ್‌ಡೌನ್‌ನ ದುರ್ಲಾಭ ಪಡೆದು ಸಮಿತಿಯ ಸದಸ್ಯರು ಪ್ರಭಾವಿಗಳೊಂದಿಗೆ ಕೈಜೋಡಿಸಿ ಅಕ್ರಮ ಮರಳುಗಾರಿಕೆಯನ್ನ ರಾಜಾರೋಷವಾಗಿ ನಡೆಸಿಕೊಳ್ಳುತ್ತಾ ಬಂದಿದ್ದಾರೆ. ಈ ಬಗ್ಗೆ ರಮೇಶ್ ಕಾಂಚನ್ ಅವರು ಎಸಿಬಿ ಹಾಗೂ ಲೋಕಾಯುಕ್ತ ಸಂಸ್ಥೆಗಳಿಗೆ ದೂರನ್ನು ಸಲ್ಲಿಸಿದ್ದು, ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ತಿಳಿಸಿರುತ್ತಾರೆ.
ಸದರಿ ದೂರಿನ ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ ಎಂದು ವಿವರಿಸಿದ್ದಾರೆ. ತಾವು ದಯವಿಟ್ಟು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮ ಮರಳುಗಾರಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕೆಂದು ತಮ್ಮಲ್ಲಿ ಈ ಮೂಲಕ ಕೋರುತ್ತೇನೆ ಎಂದು ಸಲೀಂ ಮಹಮದ್ ಮನವಿ ಮಾಡಿದ್ದಾರೆ.