ಬೆಂಗಳೂರು: ಕಾಂಗ್ರೆಸ್ ಪಕ್ಷ ಜಮೀನು ಕೊಟ್ಟಿದೆಯೇ ಹೊರತು ಕಿತ್ತುಕೊಂಡಿಲ್ಲ. ಆದರೆ ಇಂದು ಬಿಜೆಪಿ ಸರ್ಕಾರ ರೈತರ ಜಮೀನು ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ರೈತರಿಗೆ ಸಹಾಯ ಮಾಡಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದ ಸಂದರ್ಭ ಸಾಕಷ್ಟು ಕೆಲಸ ಕಾರ್ಯಗಳು ಆಗಿದ್ದವು. ಕಾಗೋಡು ತಿಮ್ಮಪ್ಪ ಸಚಿವರಾಗಿದ್ದ ಸಂದರ್ಭದಲ್ಲಿ ಕಾನೂನು ತಿದ್ದುಪಡಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದರು. ರೈತರಿಗೆ ಅನುಕೂಲ ಮಾಡಿರುವುದು ಕಾಂಗ್ರೆಸ್ನ ಇತಿಹಾಸವಾದರೆ ಕಿತ್ತುಕೊಳ್ಳುವುದು ಬಿಜೆಪಿಯ ಇತಿಹಾಸ ಆಗಿದೆ. ಇಂದು ಸಾಕಷ್ಟು ಯುವಕರು ಬೆಂಗಳೂರಿನ ತೊರೆದು ಗ್ರಾಮೀಣ ಭಾಗಗಳಿಗೆ ತೆರಳಿ ಅಲ್ಲಿ ಕೃಷಿಕಾರ್ಯ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇಂತಹ ರೈತಾಪಿ ಬದುಕು ಹುಡುಕಿ ಹೋಗುವವರ ಬದುಕನ್ನೇ ನಾಶಪಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಬೆಂಬಲಿತ ಪಕ್ಷದವರೇ ಇದೀಗ ನಿಮ್ಮ ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದಾರೆ. ದೇಶಾದ್ಯಂತ ಹಿಂದೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ನಡೆಸಿದ ಮಾದರಿಯ ಹೋರಾಟವನ್ನು ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಕಿತ್ತೊಗೆಯಲು ಮಾಡಬೇಕಾಗುತ್ತದೆ. ನಾವು ಇದಕ್ಕೂ ಹಿಂಜರಿಯುವುದಿಲ್ಲ. ಕಾಂಗ್ರೆಸ್ ರೈತರ ಪರವಾಗಿ ನಿಂತಿದೆ. ಮುಂದೆಯೂ ನಿಲ್ಲಲಿದೆ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ರಾಜ್ಯದ 60 ಶಾಸಕರು ಹಾಗೂ 30 ವಿಧಾನಪರಿಷತ್ ಸದಸ್ಯರು ನಿಮ್ಮ ಸರ್ಕಾರವನ್ನು ಕಿತ್ತೊಗೆಯಲ್ಲ. ಬದಲಾಗಿ ರಾಜ್ಯದ ರೈತರು ನಿಮ್ಮ ಸರ್ಕಾರವನ್ನು ಕಿತ್ತೊಗೆಯುತ್ತಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಇದುವರೆಗೂ ರೈತರಿಗೆ ಅನುಕೂಲವಾಗುವ ಯಾವ ಕೆಲಸವನ್ನೂ ಮಾಡಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ರೈತರ ಪರ ಕೆಲಸ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ಬೆಳೆದ ತರಕಾರಿಯನ್ನು ಕೊಂಡುಕೊಳ್ಳುವ ಮೂಲಕ ನೂರಾರು ಕೋಟಿ ಮೌಲ್ಯದ ರೈತರ ಬೆಳೆಯನ್ನು ನಾವು ಖರೀದಿಸಿದ್ದೇವೆ. ಈ ಮೂಲಕ ರೈತರ ಬದುಕನ್ನು ನಾವು ಹಸನಾಗಿಸಿದ್ದೇವೆ. ಕರ್ನಾಟಕ ಸರ್ಕಾರ ಮಾಡಬೇಕಿದ್ದ ಬೆಲೆ ನಿಯಂತ್ರಣವನ್ನು ನಾವು ಮಾಡಿದ್ದೇವೆ ಎಂದರು.