ಬೆಂಗಳೂರು: ನೆಹರೂ ಕುಟುಂಬ ಈ ದೇಶಕ್ಕೆ ಮಾಡಿರುವ ತ್ಯಾಗ, ಸೇವೆ, ಅಭಿವೃದ್ಧಿಗೆ ನೀಡಿರುವ ಕೊಡುಗೆಗೆ ಇಡೀ ಬಿಜೆಪಿ ಸರಿಸಾಟಿಯಲ್ಲ. ಆದರೂ ಅವರ ಹೆಸರಿಗೆ ಮಸಿ ಬಳಿಯಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಡುತ್ತಿರುವ ಮಾತುಗಳು ಬಿಜೆಪಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ ಟಿ ರವಿ ಕೆಲ ದಿನಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ಅವರು ಕೇವಲ ಶಾಸಕರಲ್ಲ, ಈಗ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅವರ ಮಾತುಗಳು ಅವರ ಪಕ್ಷದ ಸಂಸ್ಕೃತಿ ಏನು ಎಂಬುದನ್ನು ಎತ್ತಿ ತೋರಿಸುತ್ತವೆ. ಅವರು ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಹೆಸರಿಗೆ ಮಸಿ ಬಳಿದು, ಜನರ ಮನಸ್ಸಿನಲ್ಲಿ ತಪ್ಪು ಭಾವನೆ ಮೂಡಿಸಲು ವಿಫಲ ಯತ್ನ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೆಹರೂ ಕುಟುಂಬದ ತ್ಯಾಗಕ್ಕೆ ಬಿಜೆಪಿ ಸರಿಸಾಟಿಯಲ್ಲ:
ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ದೇಶಕ್ಕೆ ನೆಹರೂ ಕುಟುಂಬ ತಮ್ಮ ಆಸ್ತಿಯನ್ನೇ ದಾನ ಮಾಡಿದೆ. ಅದರ ಬಗ್ಗೆ ಬಿಜೆಪಿಯವರಿಗೆ ಗೊತ್ತಿಲ್ಲ. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಎರಡು ಬಾರಿ ದೇಶದ ಪ್ರಧಾನಿಯಾಗಲು ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಆಹ್ವಾನ ನೀಡಿದರೂ ದೇಶ ಮುನ್ನಡೆಸಲು ಆರ್ಥಿಕ ತಜ್ಞ ಅಗತ್ಯ ಎಂದು ಮನಮೋಹನ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟರು. ಈ ದೇಶದಲ್ಲಿ ಬಿಜೆಪಿ ನಾಯಕರು ಇಂತಹ ಯಾವುದಾದರೂ ಒಂದು ತ್ಯಾಗ ಮಾಡಿರುವುದನ್ನು ತೋರಿಸಲಿ. ಅದನ್ನು ಬಿಟ್ಟು ಹುಕ್ಕಾ ಬಾರ್ ಬಗ್ಗೆ ಮಾತನಾಡುತ್ತಾರೆ. ಇಂದಿರಾ ಕ್ಯಾಂಟೀನ್ಗೆ ಹೆಸರು ಸೂಚಿಸಿದವರು ಯಾರು ಎಂದು ಅವರ ಸಚಿವ ಸಂಪುಟದಲ್ಲಿರುವವರನ್ನೇ ಕೇಳಲಿ. ಅಲ್ಲಿರುವವರೆ ಈ ವಿಚಾರವಾಗಿ ಅರ್ಜಿಗೆ ಸಹಿ ಹಾಕಿ ಶಾಸಕರಿಂದಲೂ ಸಹಿ ಹಾಕಿಸಿದ ನಂತರ ಈ ಹೆಸರು ಇಡಲಾಗಿದೆ ಎಂದು ಹೇಳಿದರು.
ಓದಿ: ಕಾಂಗ್ರೆಸ್ ಆಫೀಸ್ನಲ್ಲಿ ಇಂದಿರಾ ಕ್ಯಾಂಟೀನ್, ನೆಹರು ಹುಕ್ಕಾ ಬಾರ್ ಮಾಡಲಿ: ಸಿಟಿ ರವಿ
ಅನುಮತಿ ಕೇಳಬೇಕಿಲ್ಲ:
ನಮಗೂ ತಮಿಳುನಾಡಿಗೂ ರಾಜಕೀಯ ಹೊಂದಾಣಿಕೆ ಇಲ್ಲದಿರಬಹುದು. ಆದರೆ ನಮಗೆ ರಾಜ್ಯದ ಬಗ್ಗೆ ಬದ್ಧತೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ನೀರಾವರಿ ಸಚಿವರು ಹಾಗೂ ಹಾಲಿ ಮುಖ್ಯಮಂತ್ರಿಗಳು. ಮೇಕೆದಾಟು ಅಣೆಕಟ್ಟೆ ಕೇವಲ ಕುಡಿಯುವ ನೀರಿನ ಯೋಜನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕುಡಿಯುವ ನೀರಿಗೆ ಯಾರದೆ ಅನುಮತಿ ಕೇಳುವ ಅಗತ್ಯವಿಲ್ಲ. ನಮಗೆ ಎಂಟು ಟಿಎಂಸಿ ನೀರು ಸೇರಬೇಕು ಎಂದು ತೀರ್ಮಾನ ಆಗಿದೆ. ಅದು ನಮ್ಮ ರಾಜ್ಯದ, ನನ್ನ ಕ್ಷೇತ್ರದ ಯೋಜನೆಯಾಗಿದ್ದು, ನಮ್ಮ ಜಿಲ್ಲೆಯಲ್ಲೇ ಒಂದು ಎಕರೆ ನೀರಾವರಿಗೂ ಈ ಯೋಜನೆಯ ನೀರು ಬಳಕೆಯಾಗುವುದಿಲ್ಲ. ಈ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಮಾತ್ರ ಬೇಕಾಗಿದ್ದು, ಯಾರ ಹಣದ ನೆರವೂ ಬೇಕಾಗಿಲ್ಲ. ಹೀಗಾಗಿ ನಾವು ಬೊಮ್ಮಾಯಿ ಅವರ ಹೇಳಿಕೆಗೆ ಬೆಂಬಲವಾಗಿ ನಿಲ್ಲುತ್ತೇವೆ. ಅವರು ಕೂಡಲೇ ಕೆಲಸ ಮಾಡಲಿ, ಭೂಸ್ವಾಧೀನ ಮಾಡಿಕೊಂಡು ಗುದ್ದಲಿ ಪೂಜೆ ನೆರವೇರಿಸಲಿ ಎಂದರು.
ಸಿದ್ದರಾಮಯ್ಯಗೆ ಶುಭಾಶಯ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 74 ವರ್ಷ ತುಂಬಿ 75ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರಿಗೆ ಶುಭಕೋರಲು ನಮ್ಮೆಲ್ಲ ಕಾರ್ಯಾಧ್ಯಕ್ಷರ ಜೊತೆ ಬಂದಿದ್ದೇನೆ. ಅವರಿಗೆ ಭಗವಂತ ಹೆಚ್ಚಿನ ಶಕ್ತಿ ನೀಡಿ ನಾಡಿನ ಜನತೆ ಕೂಡ ಅವರಿಗೆ ಹೆಚ್ಚಿನ ಪ್ರೀತಿ ನೀಡಲಿ ಎಂದು ಪ್ರಾರ್ಥಿಸಿ ಅವರಿಗೆ ಶುಭಾಶಯ ಕೋರುತ್ತೇನೆ ಎಂದು ವಿವರಿಸಿದರು.