ಬೆಂಗಳೂರು: ಹೆಣ್ಣು ಮಗಳ ಮೈಮೇಲೆ ಕೈಹಾಕಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು?, ದೇಶದಲ್ಲಿ ನೀಚ ರಾವಣ ಆಡಳಿತ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ರಸ್ತೆಗಿಳಿದು ಹೋರಾಟ ಮಾಡ್ತೇವೆ. ಹೋರಾಟದ ವಿವರವನ್ನು ಕೆಲ ದಿನಗಳಲ್ಲೇ ಘೋಷಣೆ ಮಾಡುತ್ತೇವೆ. ದೇಶದಲ್ಲಿ ನೀಚ ರಾವಣ ಆಡಳಿತ ಇದೆ. ದೇಶದ ಅನ್ನದಾತನಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಮೇಲೆ ಕೇಂದ್ರ ಸಚಿವ ಮಿಶ್ರಾ ಅವರ ಬೆಂಗಾವಲು ಪಡೆ ಕಾರನ್ನು ಹರಿಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣದ ವಿಚಾರದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ, ಡಿಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ದೇಶದ ರೈತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವುದಿಲ್ಲ:
ಪ್ರಿಯಾಂಕಾ ಗಾಂಧಿ ಬಂಧನವನ್ನು ಕಾಂಗ್ರೆಸ್ ಖಂಡಿಸಲಿದೆ. ಕಾಂಗ್ರೆಸ್ ಪ್ರಿಯಾಂಕಾ ಅವರ ಬೆನ್ನಿಗೆ ನಿಲ್ಲಲಿದೆ. ಪ್ರಿಯಾಂಕಾ ಅವರನ್ನು ಪೊಲೀಸರು ಎಳೆದಾಡಿ ದೇಶದ ಮಹಿಳೆಗೆ ಅವಮಾನ ಮಾಡಿದ್ದಾರೆ. ಪ್ರಿಯಾಂಕಾ ಅವರನ್ನ ಪೊಲೀಸರು ತಡೆದಿದ್ದು ಏಕೆ?, ಕಳೆದ 10 ತಿಂಗಳಿಂದ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಸಮಸ್ಯೆ ಆಲಿಸೋಕೆ ಒಬ್ಬೇ ಒಬ್ಬ ಬಿಜೆಪಿ ನಾಯಕ ಹೋಗಲಿಲ್ಲ. ಬ್ರಿಟಿಷರಿಗಿಂತ ಹೆಚ್ಚು ಬಿಜೆಪಿ ಅದ್ವಾನ ಮಾಡುತ್ತಿದೆ. ಮತದಾರರೇ ದಂಗೆ ಏಳುವ ಪರಿಸ್ಥಿತಿ ಉದ್ಭವಿಸಿದೆ. ಇಡೀ ದೇಶದ ಜನ ಪ್ರಿಯಾಂಕಾ ಬೆಂಬಲಕ್ಕೆ ನಿಂತಿದ್ದಾರೆ. ಇಂತಹ ಕೃತ್ಯಗಳನ್ನ ನಾವು ಖಂಡಿಸುತ್ತೇವೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವುದಿಲ್ಲ. ದೇಶದ ಜನರೇ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಡಿಕೆಶಿ ಕರೆ ನೀಡಿದರು.
ಸಿಎಂ ಬೊಮ್ಮಾಯಿ ಅವರು ಮೇಕೆದಾಟು ಯೋಜನೆ ಮಾಡುವುದಾಗಿ ಹೇಳಿರುವುದು ಒಳ್ಳೆಯದು. ಮಹದಾಯಿ ಯೋಜನೆ ಮೊದಲಿಗೆ ತನ್ನಿ, ಕೆಲಸ ಮಾಡುವುದಕ್ಕೆ ವಿಳಂಬ ಏಕೆ?. ಮೇಕೆದಾಟು ಯೋಜನೆ ಜಾರಿಗೆ ಯಾಕೆ ವಿಳಂಬ ಎಂದು ಡಿಕೆಶಿ ಪ್ರಶ್ನಿಸಿದರು.
ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ:
ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಿಂದಾದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಈ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು, ಸರ್ಕಾರ ಇದ್ದೂ ಇಲ್ಲದಂತಾಗಿದೆ. ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ ಎಂದು ಕಿಡಿಕಾರಿದರು.