ಬೆಂಗಳೂರು: ಜೂನ್ 29ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಪಕ್ಷದಿಂದ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ, ಸದ್ಯ ವಿಧಾನ ಪರಿಷತ್ನಿಂದ ನಿವೃತ್ತಿಯಾಗುತ್ತಿರುವ ಎಲ್ಲಾ 10 ಮಂದಿ ಅಭ್ಯರ್ಥಿಗಳು ಮರು ಆಯ್ಕೆ ಬಯಸಿದ್ದಾರೆ.
ಆದರೆ ಇವರಲ್ಲಿ ಕೆಲವರನ್ನು ಸಮಾಧಾನಪಡಿಸಬಹುದು. ಕೆಲ ಹಿರಿಯರನ್ನು ಅತ್ಯಂತ ವಿಶ್ವಾಸ, ಮುತುವರ್ಜಿ ಹಾಗೂ ಸಂಯಮದಿಂದ ಸಮಾಧಾನಪಡಿಸಬೇಕಾಗಿದೆ. ಯಾವುದೇ ಅಸಮಾಧಾನ, ಅತೃಪ್ತಿ, ಪಕ್ಷದ ಮೇಲೆ ಬೇಸರವಾಗದಂತೆ ನೋಡಿಕೊಳ್ಳಬೇಕಾಗಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖುದ್ದು ವಿವಿಧ ನಾಯಕರ ಮನೆಗೆ ಭೇಟಿ ನೀಡಿ ಸಮಾಲೋಚಿಸುವ ಕಾರ್ಯ ಮಾಡುತ್ತಿದ್ದಾರೆ.
ಯಾರ ಅವಧಿ ಮುಕ್ತಾಯ
ಜೂನ್ 30ರಂದು ತೆರವಾಗಲಿರುವ ರಾಜ್ಯ ವಿಧಾನ ಪರಿಷತ್ನ 7 ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಿಗದಿಯಾಗಿದೆ. ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ನಜೀರ್ ಅಹಮ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಎನ್.ಎಸ್.ಬೋಸರಾಜು, ಹೆಚ್.ಎಂ.ರೇವಣ್ಣ, ಜೆಡಿಎಸ್ ಪಕ್ಷದ ಟಿ.ಎ.ಸರವಣ ಹಾಗೂ ಪಕ್ಷೇತರರಾದ ಡಿ.ಯು.ಮಲ್ಲಿಕಾರ್ಜುನ ನಿವೃತ್ತಿಯಾಗುತ್ತಿದ್ದಾರೆ.
ಇನ್ನೊಂದೆಡೆ ಇವರ ಜತೆ ಕಾಂಗ್ರೆಸ್ ಪಕ್ಷದಿಂದ ನಾಮ ನಿರ್ದೇಶನಗೊಂಡಿರುವ ಡಾ. ಜಯಮಾಲಾ ರಾಮಚಂದ್ರ, ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜಾ, ಇಕ್ಬಾಲ್ ಅಹಮ್ಮದ್ ಸರಡಗಿ, ತಿಪ್ಪಣ್ಣ ಕಮಕನೂರ್ ನಿವೃತ್ತಿಯಾಗುತ್ತಿದ್ದಾರೆ.
ಅಲ್ಲಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ 10 ಸದಸ್ಯರ ಸ್ಥಾನ ಖಾಲಿ ಆಗುತ್ತಿದ್ದು, ಇದರಲ್ಲಿ ಮರಳಿ ಕೇವಲ ಎರಡು ಸ್ಥಾನ ಮಾತ್ರ ಪಕ್ಷಕ್ಕೆ ದಕ್ಕಲಿದೆ. ವಿಧಾನಸಭೆ ಸದಸ್ಯರ ಸಂಖ್ಯೆ 68 ಆಗಿರುವ ಹಿನ್ನೆಲೆ ಇಬ್ಬರನ್ನು ಮಾತ್ರ ಗೆಲ್ಲಿಸಿಕೊಳ್ಳುವ ಅವಕಾಶ ಕಾಂಗ್ರೆಸ್ ಪಕ್ಷಕ್ಕಿದೆ. ಉಳಿದಂತೆ ನಾಲ್ಕು ಸ್ಥಾನ ಬಿಜೆಪಿ, ಒಂದು ಸ್ಥಾನ ಜೆಡಿಎಸ್ ಗೆದ್ದುಕೊಳ್ಳುವ ಅವಕಾವಿದೆ. ಉಳಿದಂತೆ ಐದು ನಾಮ ನಿರ್ದೇಶಿತ ಸದಸ್ಯರನ್ನು ಆಡಳಿತ ಪಕ್ಷ ಬಿಜೆಪಿ ಆಯ್ಕೆ ಮಾಡಿಕೊಳ್ಳಲಿದೆ.
ನಾಯಕರ ಭೇಟಿ
ಈ ಕಾರಣದಿಂದಾಗಿ ಎಲ್ಲರನ್ನೂ ಆಯ್ಕೆ ಮಾಡಿಕೊಳ್ಳಲಾಗದ ಕಾಂಗ್ರೆಸ್, ನಾಯಕರ ಓಲೈಕೆಗೆ ಮುಂದಾಗಿದೆ. ಇದೇ ನಿಟ್ಟಿನಲ್ಲಿ ಎರಡು ದಿನಗಳ ಹಿಂದೆ ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದ ಡಿ.ಕೆ.ಶಿವಕುಮಾರ್, ಇಂದು ಮತ್ತೊಬ್ಬ ಹಿರಿಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿಧಾನ ಪರಿಷತ್ಗೆ ಮರು ಆಯ್ಕೆ ಬಯಸಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ನಿವಾಸಕ್ಕೆ ಉಪಹಾರ ಸೇವನೆ ನೆಪದಲ್ಲಿ ಇಂದು ಡಿಕೆಶಿ ಭೇಟಿ ನೀಡಿದ್ದರು.
ಹೆಚ್.ಎಂ.ರೇವಣ್ಣ ಅವರ ಮಹಾಲಕ್ಷ್ಮಿಪುರ ನಿವಾಸದಲ್ಲಿ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ನಾಯಕರೊಂದಿಗಿನ ಉಪಹಾರ ಕೂಟದಲ್ಲಿ ಭಾಗವಹಿಸಿ, ರೇವಣ್ಣನವರ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಮೇಯರ್ ಜೆ.ಹುಚ್ಚಪ್ಪ, ಪ್ರೊ. ಬಿ.ಕೆ.ರವಿ, ಕಾಂತರಾಜು, ಹನುಮಂತೇಗೌಡ ಮತ್ತಿತರು ಉಪಸ್ಥಿತರಿದ್ದರು.
ಇದೇ ಸಂದರ್ಭ ಡಿ.ಕೆ.ಶಿವಕುಮಾರ್ ಅವರು ರೇವಣ್ಣ ಜತೆ ಮಾತುಕತೆ ನಡೆಸಿ ಇರುವ ಎರಡರಲ್ಲಿ ಒಂದು ಸ್ಥಾನ ಅಲ್ಪಸಂಖ್ಯಾತ ಸಮುದಾಯಕ್ಕೆ ಹಾಗೂ ಇನ್ನೊಂದು ಸ್ಥಾನ ಇತರೆ ಹಿಂದುಳಿದ ವರ್ಗ (ಒಬಿಸಿ)ಗೆ ನೀಡಲು ತೀರ್ಮಾನಿಸಲಾಗಿದೆ. ದಯವಿಟ್ಟು ಸಹಕರಿಸಿ ಎಂದು ಕೋರಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತರೂ ಆಗಿರುವ ರೇವಣ್ಣ ಮನವೊಲಿಕೆ ಅಷ್ಟು ಸುಲಭ ಸಾಧ್ಯವೂ ಅಲ್ಲ ಎನ್ನುವ ಅರಿವು ಕಾಂಗ್ರೆಸ್ ನಾಯಕರಿಗೆ ಇದೆ. ಏಕೆಂದರೆ ಈ ಹಿಂದೆ ಒಮ್ಮೆ ಇವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿಯೂ ಇತ್ತು.
ಸ್ವಾಮೀಜಿ ಭೇಟಿ
ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ ತಮ್ಮ ಸದಾಶಿವನಗರ ನಿವಾಸದಿಂದ ತೆರಳುವ ಮುನ್ನ ಕನಕಪುರದ ಶ್ರೀ ದೇಗುಲಮಠದ ಸ್ವಾಮೀಜಿಗಳಾದ ಶ್ರೀ ಮುಮ್ಮಡಿ ಶಿವಯೋಗಿ ಶಿವರುದ್ರ ಸ್ವಾಮೀಜಿಗಳನ್ನು ಭೇಟಿ ಮಾಡಿ ಸಮಾಲೋಚಿಸಿದರು. ತಮ್ಮ ಸದಾಶಿವನಗರ ನಿವಾಸಕ್ಕೆ ಭೇಟಿ ಕೊಟ್ಟಿದ್ದ ಶ್ರೀಗಳಿಂದ ಆಶೀರ್ವಾದ ಪಡೆದರು.