ಶಿವಮೊಗ್ಗ : ಕೆಪಿಸಿಸಿ ವತಿಯಿಂದ ವಿಧಾನಸಭೆ ಚುನಾವಣೆಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಐತಿಹಾಸಿಕವಾದದ್ದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿತ್ತು. ಈ ಕುರಿತು ತೀರ್ಥಹಳ್ಳಿಯಲ್ಲಿ ಇಂದು ಎಪಿಎಂಸಿ ಪಕ್ಕದ ಮೈದಾನದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರವು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ಶಕ್ತಿ ತುಂಬಿದಂತಾಗಿದ್ದು, ಈ ವೇಳೆ ರಾಹುಲ್ ಗಾಂಧಿ ತೀರ್ಥಹಳ್ಳಿ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಹೆಸರು ಪ್ರಸ್ತಾಪಿಸದೇ, ಕಾಂಗ್ರೆಸ್ಗೆ ನಿಮ್ಮ ಬಹುಮತವಿರಲಿ ಎಂದು ಕರೆ ನೀಡಿದ್ದಾರೆ. 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೇ 40 ಪರ್ಸೆಂಟ್ ನಿಂದ 50 ಪರ್ಸೆಂಟ್ ಗೆ ಏರಿಕೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಬಗ್ಗೆ ಕೆಂಡಕಾರಿದರು.
ಮತ್ತೊಂದೆಡೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಿಂದಾಗಿ, ರಾಹುಲ್ ಗಾಂಧಿ ಜೊತೆಗೆ ಪ್ರಚಾರಕ್ಕೆ ಶಿವಣ್ಣ ಕೈ ಜೋಡಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಇನ್ನು ಪ್ರಚಾರಕ್ಕಿಳಿದಿದ್ದ ಶಿವಣ್ಣನನ್ನು ರಾಹುಲ್ ಗಾಂಧಿ ಅಪ್ಪಿಕೊಂಡು ಬರಮಾಡಿಕೊಂಡರು.
ಇದನ್ನೂ ಓದಿ : ಮೋದಿ ಸಮಾವೇಶದ ಯಶಸ್ಸಿಗೆ ದೇವರ ಮೊರೆ: 108 ತೆಂಗಿನಕಾಯಿಯ ಗಣಹೋಮ ಪೂಜೆ ಸಲ್ಲಿಸಿದ ಶಾಸಕಿ!
ಶಿವಣ್ಣ ಪ್ರತಿಕ್ರಿಯೆ : ಕಾಂಗ್ರೆಸ್ನ ಸ್ಟಾರ್ ಪ್ರಚಾರಕರಾದ ನಟ ಶಿವರಾಜ್ ಕುಮಾರ್ ಅವರು ಮಾತನಾಡಿ, ಫಿಟ್ನೆಸ್ ಎಂದರೇ ನನಗೆ ಬಹಳ ಇಷ್ಟ. ಫಿಟ್ನೆಸ್ಗೋಸ್ಕರವಲ್ಲದೆ ತಮ್ಮ ಪಕ್ಷಕ್ಕಾಗಿ ಇಡೀ ದೇಶಾದ್ಯಂತ ನಡೆದುಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ. ಕಳೆದ ಬಾರಿ ಕೂಡ ಲೋಕಸಭೆ ಚುನಾವಣೆಗೆ ಗೀತಾ ಸ್ಪರ್ಧೆ ಮಾಡಿದ್ದರು. ಗೀತಾ ಅವರ ತಂದೆ, ತಮ್ಮ ಮಾವ ಬಂಗಾರಪ್ಪನವರ ಆಶಯ ಇದೇ ಇರಬೇಕು. ಹೀಗಾಗಿ ತಮ್ಮ ಪತ್ನಿ ಗೀತಾ ಅವರು, ಸಹೋದರ ಮಧು ಬಂಗಾರಪ್ಪ ಅವರೊಂದಿಗೆ ಪಾಲಿಟಿಕ್ಸ್ ಸೇರಿಕೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್ ಕೂಡ ರಾಹುಲ್ ಗಾಂಧಿಯವರಿಗೆ ಧನ್ಯವಾದ ಅರ್ಪಿಸಿದರು.
ವೇದಿಕೆ ಏರದೆ ಕೆಳಗೆ ಕುಳಿತ ಅಭ್ಯರ್ಥಿ ಕಿಮ್ಮನೆ ರತ್ನಾಕರ್ : ಸಮಾವೇಶದಲ್ಲಿ ಖುದ್ದು ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ವೇದಿಕೆ ಏರದೇ ಕೆಳಭಾಗದಲ್ಲಿಯೇ ಆಸೀನರಾಗಿದ್ದು ವಿಶೇಷವಾಗಿತ್ತು. ವೇದಿಕೆ ಏರಿ ಮತಯಾಚನೆ ಮಾಡದೇ, ಭಾಷಣ ಮಾಡದೇ ಕೆಳಗೆ ಕುಳಿತು ಸಭೆ ವೀಕ್ಷಣೆ ಮಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಪರವಾಗಿ ಶಿವರಾಜ್ ಕುಮಾರ್, ಪತ್ನಿ ಗೀತಾ ಮತಯಾಚನೆ ಮಾಡಿದರು. ಸಭೆಯಲ್ಲಿ ಮಧು ಬಂಗಾರಪ್ಪ, ಆರ್.ಎಂ. ಮಂಜುನಾಥ ಗೌಡ ಸೇರಿದಂತೆ ಜಿಲ್ಲಾ ಮಟ್ಟದ ನಾಯಕರುಗಳು ಹಾಜರಿದ್ದರು.
ಇದನ್ನೂ ಓದಿ : ಅಂದು ಶ್ರೀರಾಮನನ್ನು ಬಂಧಿಸಿಟ್ಟಿದ್ದರು, ಈಗ ಬಜರಂಗದಳ ಕಾರ್ಯಕರ್ತರ ಬಂಧನಕ್ಕೆ ಕಾಂಗ್ರೆಸ್ ಸಂಕಲ್ಪ ಮಾಡಿದೆ : ಮೋದಿ ವಾಗ್ದಾಳಿ