ಬೆಂಗಳೂರು: ಡ್ರಗ್ಸ್ ವಿಚಾರದಲ್ಲಿ ಯಾರು ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಬೇಕು. ಯಾರನ್ನೋ ಕೇವಲ ಪ್ರಚಾರಕ್ಕೆ ನಟ-ನಟಿಯರು, ರಾಜಕಾರಣಿಗಳು ಅಂತ ಹೇಳಿ ಸುದ್ದಿ ಮಾತ್ರ ಮಾಡಿದರೆ ಆಗೋದಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ಹರಡಿರುವ ವಿಚಾರವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದ ಮುಂಭಾಗ ಮಾಧ್ಯಮದವರೊಂದಿಗೆ ಮಾತನಾಡಿ, ಅವರ ಮಕ್ಕಳು, ಇವರ ಮಕ್ಕಳು ಅಂತಿಲ್ಲ. ಇಡೀ ದೇಶದಲ್ಲಿ, ಬೆಂಗಳೂರಲ್ಲಿ ವ್ಯಾಪಕವಾಗಿ ಜಾಲ ಹಬ್ಬಿದೆ. ಇದನ್ನು ಯಾರು ಪೂರೈಕೆ, ವಿತರಣೆ ಮಾಡ್ತಾರೋ ಅಂಥವರ ವಿರುದ್ಧ ಕಠಿಣ ಕ್ರಮ ಆಗಬೇಕು. ಪ್ರಚಾರದ ಹೊರತಾಗಿ ಕಟ್ಟುನಿಟ್ಟಿನ ಕ್ರಮ ಆಗಬೇಕಿದೆ. ಸದನಲ್ಲೂ ಡ್ರಗ್ಸ್ ವಿಚಾರ ತೆಗೆದುಕೊಳ್ಳೋಣ ಎಂದರು.
ಎಲ್ಲಾ ವಿಚಾರದಲ್ಲೂ ರಾಜಾಹುಲಿಯಾಗಬೇಕು
ಮುಖ್ಯಮಂತ್ರಿಗಳು ಎಲ್ಲ ವಿಚಾರದಲ್ಲೂ ರಾಜಾ ಹುಲಿ ಆಗಬೇಕು. ಬರೀ ರಾಜ ಇಲಿಯಾದರೆ ಪ್ರಯೋಜನವಿಲ್ಲ. ಸರ್ಕಾರ ಸಾಲ ಮಾಡಲು ಮುಂದಾಗಿದೆ. ಕೇಂದ್ರದ ಮುಂದೆ ಮಾತನಾಡೋ ಧೈರ್ಯವೇ ಇಲ್ಲ. ಏನೂ ಮಾಡದೆ ಕೈಕಟ್ಟಿ ಕುಳಿತರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದರು.