ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ಕೋವಿಡ್-19 ಲಸಿಕೆಯ ಸಂಗ್ರಹ ಮತ್ತು ವಿತರಣೆಯನ್ನು ನಿಭಾಯಿಸುವ ಸಾಮರ್ಥ್ಯವಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ (ಬಿಐಎಎಲ್) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಹೇಳಿದ್ದಾರೆ.
ಕೋವಿಡ್ ಲಸಿಕೆ ಸಂಗ್ರಹ ಮತ್ತು ವಿತರಣೆಯಲ್ಲಿ ದೊಡ್ಡ ಸವಾಲಿದ್ದು, ಪ್ರಪಂಚದಾದ್ಯಂತ ವಿವಿಧ ಕಂಪನಿಗಳು ಕೋವಿಡ್- 19 ಲಸಿಕೆಯ ಸಂಶೋಧನೆಯಲ್ಲಿವೆ. ಕೆಲವು ಕಂಪನಿಗಳ ಲಸಿಕೆಗಳು ಟ್ರಯಲ್ ಹಂತದಲ್ಲಿವೆ. ವಿವಿಧ ಕಂಪನಿಗಳ ಕೋವಿಡ್-19 ಲಸಿಕೆಗಳು ವಿಭಿನ್ನ ಗುಣಲಕ್ಷಣ ಹೊಂದಿದ್ದು, ಅವುಗಳ ಸಂಗ್ರಹಕ್ಕೆ ಬೇರೆ ಬೇರೆಯಾದ ಸೌಲಭ್ಯಗಳು ಇರಬೇಕು.
ಆದ್ದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ಈಗ ಕೋವಿಡ್ ಲಸಿಕೆಗಳ ಸಂಗ್ರಹ ಮತ್ತು ವಿತರಣೆ ಅಸಾಧ್ಯವಾಗಿದೆ. ಆದರೆ ಕಾರ್ಗೋ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇದೆ. ಮೈನಸ್ 15 ಡಿಗ್ರಿ ಸೆಲ್ಸಿಯಸ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಇದೆ. ಕೋವಿಡ್-19 ಲಸಿಕೆಯ ಸ್ಪಷ್ಟವಾದ ಚಿತ್ರಣ ಸಿಕ್ಕಾಗ ಅದರ ಸಂಗ್ರಹ ಮತ್ತು ವಿತರಣೆಗಾಗಿ ಸರ್ಕಾರದೊಂದಿಗೆ ಸಮನ್ವಯ ಸಾಧಿಸುವುದಾಗಿ ಹೇಳಿದ್ದಾರೆ.