ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕಿತರಿರುವ ಐದನೇ ನಗರವಾಗಿದೆ. ನಗರದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳಿಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳವೇ ಕಾರಣ ಎನ್ನಲಾಗ್ತಿದೆ. ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿರುವುದೂ ಕೂಡ ಕೋವಿಡ್ ಏರಿಕೆಯಾಗುವುದಕ್ಕೆ ಕಾರಣವಾಗ್ತಿದೆ. ನಗರದಲ್ಲಿ 200ಕ್ಕೆ ಇಳಿದಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಈಗ 500ಕ್ಕೆ ಏರಿಕೆಯಾಗಿದೆ.
ನಿನ್ನೆಯೂ (ಮಾರ್ಚ್ 15) 550 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಐದು ಮಂದಿ ಮೃತಪಟ್ಟಿದ್ದಾರೆ. ಒಟ್ಟು 6,454 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ರಾಜ್ಯದ ಪ್ರಕರಣಗಳ 65.3% ಕೇವಲ ಬೆಂಗಳೂರಲ್ಲೇ ಕಂಡುಬರುತ್ತಿದೆ. ಅದರಲ್ಲೂ ಕಳೆದ ಏಳು ದಿನಗಳಿಂದ ದಕ್ಷಿಣ ವಲಯ, ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯಗಳಲ್ಲಿ ಹೆಚ್ಚೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ.
ಇನ್ನು ರಾಜಧಾನಿ ಬೆಂಗಳೂರಿಗೆ ಹೊರರಾಜ್ಯ, ಹೊರದೇಶಗಳಿಂದ ಹೆಚ್ಚು ಜನರ ಓಡಾಟ ಇರುವುದರಿಂದ ಸೂಪರ್ ಸ್ಪ್ರೆಡರ್ ಕೋವಿಡ್ ವೈರಸ್ಗಳು ಕೂಡ ಹಬ್ಬುತ್ತಿವೆ. ಸರ್ಕಾರದ ಸೂಚನೆ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ಟೆಸ್ಟಿಂಗ್ ನಡೆಸಲು ಹಾಗೂ ವ್ಯಾಕ್ಸಿನ್ ನೀಡಲು ಬಿಬಿಎಂಪಿ ಶ್ರಮ ವಹಿಸುತ್ತಿದೆ. ನಗರದಲ್ಲಿ ನಿತ್ಯ 30 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿದೆ. ಇದನ್ನು ಏರಿಕೆ ಮಾಡಲು ಕೂಡ ಬಿಬಿಎಂಪಿ ಯತ್ನಿಸುತ್ತಿದೆ.
ಕೊರೊನಾ ಪ್ರಕರಣದಲ್ಲಿ ನಿತ್ಯ ಏರಿಕೆ ಕಾಣುತ್ತಿರುವ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಡಿಸೆಂಬರ್, ಜನವರಿ, ಫೆಬ್ರವರಿಗಿಂತ ಮಾರ್ಚ್ನಲ್ಲಿ ಕೇಸ್ಗಳ ಸಂಖ್ಯೆ ಹೆಚ್ಚಳ ಕಂಡಿದೆ. ಡಿಸೆಂಬರ್ನಲ್ಲಿ ದಿನವೊಂದಕ್ಕೆ 600 ಪ್ರಕರಣ ಇತ್ತು. ಜನವರಿಯಲ್ಲಿ ಸರಾಸರಿ 333ಕ್ಕೆ ಇಳಿಕೆಯಾಗಿತ್ತು. ಫೆಬ್ರವರಿಯಲ್ಲಿ ಸರಾಸರಿ 243 ಪ್ರಕರಣ ಮಾತ್ರ ಇತ್ತು. ಆದ್ರೆ ಈಗ ಮಾರ್ಚ್ನಲ್ಲಿ ಸರಾಸರಿ 333 ಕೇಸ್ಗಳು ಆಗ್ತಿವೆ. ಅಲ್ಲದೆ ಕಳೆದ ಎರಡು ಮೂರು ದಿನದಿಂದ 500ಕ್ಕೆ ಹೆಚ್ಚಳ ಕಂಡಿದೆ. ಕೊರೊನಾ ಪಾಸಿಟಿವ್ ಆದ್ರೆ 15 ದಿನ ಮುಂಚಿತವಾಗಿ ಸಂಪರ್ಕ ಇದ್ದವರನ್ನ ಗುರುತಿಸಲಾಗ್ತಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಕಂಡು ಹಿಡಿಯಲು ಸೂಚನೆ ನೀಡಲಾಗಿದೆ. ಮಾಲ್, ಸ್ಕೂಲ್ಸ್, ಕಾಲೇಜು, ಹೋಟೆಲ್, ಥಿಯೇಟರ್, ಮಾರುಕಟ್ಟೆ ಮೇಲೆ ನಿಗಾ ಇಡಲಾಗುತ್ತದೆ ಎಂದರು.
ಓದಿ:ನಮ್ಮ ಮುತ್ತಾತಂದಿರನ್ನ ಕಾಪಾಡಿ ನಾವೀಗ ಬದುಕಲು ಕಾರಣವಾದವರು ನೀವು.. ಹೆಚ್‌ಡಿಕೆ ಸ್ಮರಿಸಿದ ಈ ವ್ಯಕ್ತಿ ಯಾರು!?
ಇನ್ನು ಆಫ್ರಿಕನ್ ವೈರಸ್ ಬಹಳ ವೇಗವಾಗಿ ಹರಡ್ತಿದೆ. ಸದ್ಯ ಶಿವಮೊಗ್ಗದಲ್ಲಿ ಆ ವ್ಯಕ್ತಿ ಇದ್ದಾರೆ. ಮಹಾರಾಷ್ಟ್ರದಲ್ಲಿ 13 ಸಾವಿರ ಕೇಸ್ಗಳು ಒಂದೇ ದಿನ ವರದಿಯಾಗಿದ್ದು, ವೇಗವಾಗಿ ಹರಡುತ್ತಿದೆ. ನಗರದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು, ಕೊರೊನಾ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದಿದ್ದಾರೆ.
ಕಂಟೇನ್ಮೆಂಟ್ ಝೋನ್ಗೆ ಒಳಗಾದ ಹೆಚ್ಚು ಪ್ರಕರಣಗಳು ಕಂಡುಬಂದ ಆರು ಸ್ಥಳಗಳು:
1) ಯಲಹಂಕದ ವಾರ್ಡ್ 3ರ, ಇನ್ಸ್ ಪೈರ್ ಲೈವ್ ಸ್ಯೂಟ್ ಪಿಜಿಯಲ್ಲಿ ಒಟ್ಟು 12 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. ಮಾರ್ಚ್ 20ರವರೆಗೆ ಕಂಟೇನ್ಮೆಂಟ್ ಮಾಡಲಾಗಿದೆ.
2) ಬೊಮ್ಮನಹಳ್ಳಿ ವಾರ್ಡ್ 186ರ ಓಮ್ ಅಪೆರೆಲ್ ಫ್ಯಾಕ್ಟರಿಯಲ್ಲಿ 13 ಜನಕ್ಕೆ ಪಾಸಿಟಿವ್ ಕಂಡುಬಂದಿದ್ದು, ಮಾರ್ಚ್ 18ರವರೆಗೆ ಕಂಟೇನ್ಮೆಂಟ್ ಮಾಡಲಾಗಿದೆ.
3) ಮಹದೇವಪುರದ ವಾರ್ಡ್ 55ರಲ್ಲಿ ಬಿ.ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ 9 ಜನಕ್ಕೆ ಪಾಸಿಟಿವ್ ಕಂಡುಬಂದಿದ್ದು, ಮಾರ್ಚ್ 19ರವರೆಗೆ ಕಂಟೇನ್ಮೆಂಟ್ ಇರಲಿದೆ.
4) ಯಲಹಂಕ ವಾರ್ಡ್ 6ರ ನವಗ್ರಹ ಅಪಾರ್ಟ್ಮೆಂಟ್ನಲ್ಲಿ ಆರು ಜನರಲ್ಲಿ ಪಾಸಿಟಿವ್ ಇದ್ದು, ಮಾರ್ಚ್ 22ರವರೆಗೆ ಕಂಟೇನ್ಮೆಂಟ್ ಇರಲಿದೆ.
5) ದಕ್ಷಿಣ ವಲಯದ ವಾರ್ಡ್164ರ ಸರ್ಕಾರಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಹಾಸ್ಟೆಲ್, ವಿದ್ಯಾಪೀಠದಲ್ಲಿ ಮಾರ್ಚ್ 12ರಂದು 8 ಜನರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಮಾರ್ಚ್ 26ರವರೆಗೆ ಕಂಟೇನ್ಮೆಂಟ್ ಇರಲಿದೆ.
6) ದಾಸರಹಳ್ಳಿ ವಾರ್ಡ್ 15ರ ಟಿ ದಾಸರಹಳ್ಳಿ- ನೃಪತುಂಗ ರಸ್ತೆಯ ಬಳಿ 5 ಜನರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಮಾರ್ಚ್ 29ರವರೆಗೆ ಕಂಟೇನ್ಮೆಂಟ್ ಇರಲಿದೆ.
ನಗರದ ಹೊರವಲಯಗಳಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣ ಕಂಡುಬರುತ್ತಿವೆ. ಬೆಳ್ಳಂದೂರು, ಹಗದೂರು, ಬಿಟಿಎಮ್ ಲೇಔಟ್, ಶಾಂತಲಾ ನಗರ, ಕೋಣನಕುಂಟೆ, ಜ್ಞಾನಭಾರತಿ ವಾರ್ಡ್, ಹೊಸಕೆರೆಹಳ್ಳಿ, ಬಾಣಸವಾಡಿ, ಬನಶಂಕರಿ ಟೆಂಪಲ್ ವಾರ್ಡ್, ದೊಡ್ಡನೆಕ್ಕುಂದಿ ವಾರ್ಡ್ಗಳಲ್ಲಿ ಅತಿ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ.
ಕೋವಿಡ್ ಎರಡನೇ ಅಲೆ ಬಗ್ಗೆ ಮಾತನಾಡಿರುವ ತಜ್ಞ ವೈದ್ಯರಾದ ಡಾ. ಆಂಜನಪ್ಪ, ಜನರು ತಮ್ಮ ಎಚ್ಚರಿಕೆಯಲ್ಲಿ ತಾವು ಇರಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಓಡಾಟ ನಡೆಸಿದರೆ ಎಲ್ಲರೂ ಸುರಕ್ಷಿತವಾಗಿರಬಹುದು. ಏಕಾಏಕಿ ಲಾಕ್ಡೌನ್ ಮಾಡುವುದರಿಂದ ಜನಸಾಮಾನ್ಯರಿಗೂ ಕಷ್ಟ ಆಗಲಿದೆ. ಅದೇ ರೀತಿ ಪ್ರಕರಣ ಹೆಚ್ಚಾಗಿದ್ದರೂ ಮರಣ ಪ್ರಮಾಣ ಕಡಿಮೆ ಇದೆ. ಉಸಿರಾಟದ ಸಮಸ್ಯೆ ಬಂದಾಗ ಪ್ರತೀ ಖಾಸಗಿ-ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ನೂರರಷ್ಟಾದರೂ ಹಾಸಿಗೆ ಸಿದ್ಧವಿರಬೇಕಾಗುತ್ತದೆ ಎಂದರು.