ಬೆಂಗಳೂರು: ನಾಳೆ ಅಂತಾರಾಷ್ಟ್ರೀಯ ಕೌಶಲ್ಯ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೆ ಬದುಕು ರೂಪಿಸಿಕೊಳ್ಳಲು ಅವಕಾಶವಿದೆ. ಪ್ರಗತಿಗೆ ಶಿಕ್ಷಣ, ಕೌಶಲ್ಯ ಬಹಳ ಮುಖ್ಯ. ಜೀವನಶೈಲಿ, ಜೀವನೋಪಾಯಕ್ಕೆ ಕೌಶಲ್ಯ ಅವಶ್ಯಕ. ಕೃಷಿ ಸೇರಿ ಎಲ್ಲಾ ಕಡೆ ಗುಣಮಟ್ಟ ಹೆಚ್ಚಿಸಬೇಕಿದೆ ಎಂದರು.
ಐಟಿಐ ಕಾಲೇಜು ಉನ್ನತೀಕರಣ
ರಾಜ್ಯದಲ್ಲಿರುವ 150 ಐಟಿಐ ಕಾಲೇಜುಗಳನ್ನು ಉನ್ನತೀಕರಿಸಲು ನಿರ್ಧರಿಸಲಾಗಿದೆ. ಉದ್ಯೋಗ ಸೃಷ್ಟಿಸಲು 30 ಜಿಲ್ಲೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಕೌಶಲ್ ಪಂಜಿ ಪೋರ್ಟಲ್ ನೋಂದಣಿ ಅಭಿಯಾನವನ್ನು ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಿರುಚಿತ್ರಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮೂರು ಜಿಲ್ಲೆಗಳಲ್ಲಿ ಆಟೋಮೋಟೀವ್ ಸ್ಕಿಲ್ ಕೋರ್ಸ್ ಅನ್ನು ಪ್ರಾರಂಭಿಸಲು ಟೊಯೋಟಾ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಯುವಕರಿಗೆ ತರಬೇತಿ ನೀಡಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಒಡಂಬಡಿಕೆಗೆ ಸಹಿ ಹಾಕಲಾಗುವುದು ಎಂದರು.
ವರ್ಚುವಲ್ ಜಾಬ್ ಫೇರ್ ಆಯೋಜಿಸುತ್ತೇವೆ. ಕೋವಿಡ್ ಹಿನ್ನೆಲೆ ವರ್ಷವಿಡೀ ಇದರ ಅನುಷ್ಠಾನವಾಗಲಿದೆ. ವರ್ಷವೆಲ್ಲ ಉದ್ಯೋಗ ಪಡೆಯಲು ಆನ್ಲೈನ್ ಮೂಲಕ ಅವಕಾಶ ಕಲ್ಪಿಸುತ್ತೇವೆ. ಇದರಿಂದ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಬೇಡಿಕೆ ಇರುವ ಉದ್ಯೋಗಗಳನ್ನು ಮಾತ್ರ ಸೃಷ್ಟಿಸಲಾಗುತ್ತದೆ. ಹಳೆಯ ಕಲಿಕೆಗೆ ಹೊಸ ರೂಪ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಉದ್ಯೋಗದ ಕೊರತೆಯಿಲ್ಲ. ಹೊಸ ಹೊಸ ಉದ್ಯೋಗ ನಿರ್ಮಾಣವಾಗುತ್ತಿದೆ. 60 ಲಕ್ಷ ಜನ ಪಿಎಫ್ಗೆ ನೋಂದಾವಣೆ ಆಗುತ್ತಿದ್ದಾರೆ. ಇದನ್ನು ನೋಡಿದರೆ ಉದ್ಯೋಗ ಪ್ರಮಾಣದ ಬಗ್ಗೆ ಅರ್ಥವಾಗುತ್ತದೆ. ಉದ್ಯೋಗ ಪಡೆಯುವ ದಾರಿ ಕೆಲವರಿಗೆ ಗೊತ್ತಿಲ್ಲ. ಹಾಗಾಗಿಯೇ ಇವತ್ತು ದಾರಿಯನ್ನು ತೋರಿಸುತ್ತಿದ್ದೇವೆ. ಕೌಶಲ್ಯಾಧಾರಿತ ತರಬೇತಿ ನೀಡುತ್ತಿದ್ದೇವೆ. ಎಂದಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಲ್ ಟಿಕೆಟ್ ಸಿಗದಿದ್ದರೆ ಹೀಗೆ ಮಾಡಿ...