ಬೆಂಗಳೂರು : ನಿನ್ನೆ ಸಾಯಂಕಾಲ ನಡೆದ ಹಲ್ಲೆ ಬಗ್ಗೆ ಕೋಮಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ನೋಡಿದರೆ ಇದು ಉದ್ದೇಶಪೂರ್ವಕವಾಗಿಯೇ ನಡೆದಿರುವ ಹಲ್ಲೆ ಎಂದು ಕೋಮಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಂಪೇಗೌಡ ಸಿನಿಮಾದಿಂದ ಈ ಘಟನೆ ನಡೆದಿದೆಯಾ ಎಂದು ಸುದ್ದಿಗಾರರರು ಕೋಮಲ್ರನ್ನ ಕೇಳಿದಾಗ, ಈ ಸಂದರ್ಭದಲ್ಲಿ ನಾನು ಸಿನಿಮಾ ಬಗ್ಗೆ ಮಾತನಾಡುವುದಿಲ್ಲ ಎಂದು ಉತ್ತರಿಸಿದ್ದಾರೆ.
ಘಟನೆ ಏನು..?
ಸ್ಯಾಂಡಲ್ವುಡ್ ನಟ ಕೋಮಲ್ ಕುಮಾರ್ ಮೇಲೆ ನಿನ್ನೆ ಸಾಯಂಕಾಲ ಶ್ರೀರಾಂಪುರ ರೈಲ್ವೆ ಅಂಡರ್ ಪಾಸ್ ಬಳಿ ವಿಜಯ್ ಎಂಬ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಕೋಮಲ್ ಕಾರು ವ್ಯಕ್ತಿ ಬೈಕ್ಗೆ ಟಚ್ ಆಯಿತು ಎಂಬ ಕಾರಣಕ್ಕೆ, ಕೋಮಲ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಕೋಮಲ್ ತನ್ನ ಮಗಳನ್ನು ಟ್ಯೂಷನ್ಗೆ ಬಿಟ್ಟು ಬರುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಕೋಮಲ್ ಹೇಳಿದ್ದಾರೆ. ರಸ್ತೆಯಲ್ಲಿ ಗಾಡಿ ಚಲಾಯಿಸುವ ವೇಳೆ ನಾಲ್ಕು ಜನ ಪೊರ್ಕಿಗಳು ಸೈಡ್ ಬಿಡಲಿಲ್ಲ ಅಂತ ವಿನಾಕಾರಣ ಜಗಳ ತೆಗೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ ಅವರ್ಯಾರೂ ನನಗೆ ಗೊತ್ತಿಲ್ಲ. ನನ್ನ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಕ್ಕೆ ನಾನು ಕಾರಿನಿಂದ ಇಳಿದೆ. ಆ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆಯಾಯಿತು ಎಂದು ಹೇಳಿದ್ದಾರೆ.