ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿ ಕ್ಷೇತ್ರ ಪರಿಶೀಲನೆ ಮಾಡಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ.
ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕೋಲಾರವೇ ಸೇಫ್ ಆಗಿರುವ ಕ್ಷೇತ್ರ ಎನ್ನುವ ಮಾತುಗಳು ಸಹ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಕೋಲಾರಕ್ಕೆ ಸಿದ್ದರಾಮಯ್ಯ ಅವರು ಎಂಟ್ರಿ ಕೊಡುತ್ತಿದ್ದಂತೆ ಬೆಂಗಳೂರಿನಲ್ಲಿ ಜೆಡಿಎಸ್ನಲ್ಲಿ ರಾಜಕೀಯ ಚಟುವಟಿಕೆ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಎರಡು ದಿನಗಳ ಹಿಂದೆ ಬೆನ್ಸನ್ ಟೌನ್ ನಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಭಾರಿ ಕುತೂಹಲ ಮೂಡಿಸಿದೆ.
ಕುಮಾರಸ್ವಾಮಿ ಹಾಗೂ ಇಬ್ರಾಹಿಂ ಅವರು ಒಂದೂವರೆ ಗಂಟೆಗಳ ಕಾಲ ಸಮಾಲೋಚನೆ ನಡೆಸಿರುವುದನ್ನು ಗಮನಿಸಿದರೆ ಕೋಲಾರಕ್ಕೆ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಸಲು ಚರ್ಚೆ ನಡೆಯಿತೇ? ಎಂಬ ಪ್ರಶ್ನೆಯೂ ಮೂಡಿದೆ. ಕೋಲಾರದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. 6 ತಿಂಗಳ ಹಿಂದೆಯೇ ಅಭ್ಯರ್ಥಿ ಫೈನಲ್ ಆಗಿದೆ. ಸಿದ್ದರಾಮಯ್ಯ ಬಂದ್ರು ಅಂತ ಮತ್ತೆ ಹೊಸ ಅಭ್ಯರ್ಥಿ ಹಾಕಲ್ಲವೆಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಮುಸ್ಲಿಂ ಮತಗಳು ನಮ್ಮ ಜೊತೆಯೇ ಇರುತ್ತವೆ. ಸಿದ್ದರಾಮಯ್ಯ ಇದ್ದ ಕಡೆ ಕುರುಬರು ಇಲ್ಲವಾ? ಹಾಗೆಯೇ ಸಾಬ್ರು ಇರುವ ಕಡೆ ಇಬ್ರಾಹಿಂ ಇರೋಲ್ಲವಾ? ಅದರಲ್ಲಿ ತಪ್ಪೇನಿದೆ? ಅವರಿಗೆ ಅವರು ನಾಯಕರು, ನಮಗೆ ನಾವು ನಾಯಕರು. ಕೋಲಾರದಲ್ಲಿ ವರ್ತೂರ್ ಪ್ರಕಾಶ್ ನೋಡಿಕೊಳ್ಳೋಕೆ ಸಿದ್ದರಾಮಯ್ಯಗೆ ಹೇಳಿ ಸಾಕು ಎಂದಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹಿಂ ಅವರನ್ನು ಕಣಕ್ಕಿಳಿಸಲು ಕಾರ್ಯತಂತ್ರ ರೂಪಿಸಲಾಗಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ. ಕೋಲಾರದಲ್ಲಿ 45 ಸಾವಿರ ಮುಸ್ಲಿಂ ಹಾಗೂ 40 ಸಾವಿರ ಒಕ್ಕಲಿಗ ಸಮುದಾಯದ ಮತಗಳಿರುವ ಕಾರಣ ಸಿ.ಎಂ. ಇಬ್ರಾಹಿಂ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎಂದು ಜೆಡಿಎಸ್ ನಿರ್ಧರಿಸಿದೆ. ಒಂದೊಮ್ಮೆ ಸಿದ್ದರಾಮಯ್ಯ ಹಾಗೂ ಇಬ್ರಾಹಿಂ ಮುಖಾಮುಖಿಯಾದರೆ ಅದು ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಲಿದೆ.
ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಸೆಳೆಯಲೂ ಜೆಡಿಎಸ್ ಮುಂದಾಗಿತ್ತು. ಪ್ರಾಥಮಿಕ ಹಂತದ ಮಾತುಕತೆಯೂ ನಡೆದಿತ್ತು. ಆದರೆ, ಅದು ಅರ್ಧಕ್ಕೆ ನಿಂತಿದೆ. ಈ ನಡುವೆ ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿದರೆ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಸಂಬಂಧ ಈಗಾಗಲೇ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರ ಜತೆ ಚರ್ಚಿಸಿದ್ದು, ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕೆ ಜೆಡಿಎಸ್-ಬಿಜೆಪಿ ಒಪ್ಪಂದ ಮಾಡಿಕೊಳ್ಳುತ್ತವೆ ಎನ್ನುವುದು ಸುಳ್ಳು. ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಸಿದ್ದರಾಮಯ್ಯ ಸೋಲಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಮ್ಮ ಸ್ವಂತ ಶಕ್ತಿ ಮೇಲೆ ನಾವು ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ಜೊತೆ ಸೇರಿ ಕುತಂತ್ರ ರಾಜಕೀಯ ಮಾಡಿ ಸಿದ್ದರಾಮಯ್ಯನವರನ್ನು ಸೋಲಿಸಲ್ಲ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಚುನಾವಣೆಯಲ್ಲಿ ನಾವೇ ಸೋಲಿಸ್ತೇವೆ. ಇದೆಲ್ಲ ವಿಧಿ ಆಟ ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೋಲಾರ ಕ್ಷೇತ್ರದಲ್ಲಿ ಪಡೆದಿದ್ದು 38,537 ಮತಗಳು ಮಾತ್ರ. ಬಿಜೆಪಿಯ ಪ್ರಭಾವ ಜಿಲ್ಲೆಯಲ್ಲಿ ಅಷ್ಟಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸಾಕಷ್ಟು ಪ್ರಭಾವ ಹೊಂದಿವೆ. ಆದ್ದರಿಂದ ಸಿದ್ದರಾಮಯ್ಯ ಕೋಲಾರ ಆಯ್ಕೆ ಮಾಡಿಕೊಳ್ಳಲಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆ.
ಕಳೆದ ಭಾನುವಾರ ಕೋಲಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಈಗ ನಾಮಪತ್ರ ಸಲ್ಲಿಸಲು ಬಂದಿಲ್ಲ. ಹೈಕಮಾಂಡ್ ಒಪ್ಪಿಗೆ ನೀಡಿ, ನಾಮಪತ್ರ ಸಲ್ಲಿಕೆ ಮಾಡಲು ಬಂದಾಗ ಜೋರಾಗಿ ಚಪ್ಪಾಳೆ ಹೊಡೆಯಿರಿ. ಕೋಲಾರದಿಂದ ಸ್ಪರ್ಧಿಸಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ, ಆಗಲ್ಲ ಎನ್ನಲಾರೆ ಎಂದು ಹೇಳಿದ್ದರು.
ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸುರಕ್ಷಿತವೇ?: ಇದು ಸದ್ಯ ಎಲ್ಲರನ್ನೂ ಕಾಡುವ ಪ್ರಶ್ನೆ. ಕ್ಷೇತ್ರದಲ್ಲಿ ಅಹಿಂದ, ಅಲ್ಪ ಸಂಖ್ಯಾತ, ಒಕ್ಕಲಿಗ ಮತಗಳು ಹೆಚ್ಚಿವೆ. ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಸೇರಿದ ನಾಯಕರು. ಈಗಾಗಲೇ ಕೋಲಾರದಲ್ಲಿ ಖಾಸಗಿ ಸಂಸ್ಥೆ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಸಿದ್ದರಾಮಯ್ಯ ಗೆಲ್ಲುವ ಸಾಧ್ಯತೆ ಶೇ 60ರಷ್ಟಿದೆ ಎಂಬ ವರದಿ ಬಂದಿದೆ. ಇದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವವಿದೆ. ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್, ಜೆಡಿಎಸ್ ಪ್ರಭಾವ ಹೆಚ್ಚಿದೆ. ಕೋಲಾರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ನ ಕೆ. ಶ್ರೀನಿವಾಸ ಗೌಡ 82,788 ಮತಗಳನ್ನು ಪಡೆದು ಜಯಗಳಿಸಿದ್ದರು. ರಾಜ್ಯಸಭೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷದಿಂದ ಉಚ್ಛಾಟನೆಗೊಂಡಿರುವ ಅವರು ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದಾರೆ.
ಅದು ಅಲ್ಲದೇ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುತ್ತಾರೆ ಎಂದರೆ ಮತ್ತಷ್ಟು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಬಹುದು?. ಆಗ ಪಕ್ಷದ ಪ್ರಭಾವ ಮತ್ತಷ್ಟು ಹೆಚ್ಚಲಿದ್ದು, ಸಿದ್ದರಾಮಯ್ಯ ಗೆಲುವಿಗೆ ಸಹಕಾರಿ ಆಗಲಿದೆ ಎಂಬುದು ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: ಬೇಡಿಕೆ ಈಡೇರಿಸುವಂತೆ ಕಬ್ಬು ಬೆಳೆಗಾರರ ಆಗ್ರಹ.. ಮಂಡ್ಯದಲ್ಲಿ ರೈತರ ಬೃಹತ್ ಪ್ರತಿಭಟನೆ