ಬೆಂಗಳೂರು: ತೆಲಂಗಾಣ ಮಾದರಿಯಲ್ಲಿ ನಮ್ಮ ನೌಕರರನ್ನೂ ವಜಾ ಮಾಡೋದಿದ್ದರೆ ಮಾಡಲಿ. ಅದನ್ನೂ ನೋಡಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಕೊಡಿಹಳ್ಳಿ ಚಂದ್ರಶೇಖರ್ ಸವಾಲು ಹಾಕಿದ್ದಾರೆ.
ಕೆಎಸ್ಆರ್ಟಿಸಿ ನೌಕರರಿಗೆ 6ನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದಿದ್ದು ಮೂರನೇ ದಿನದ ಬಂದ್ ಹಾಗೂ ನಾಲ್ಕನೇ ದಿನದ ಪ್ರತಿಭಟನೆಯ ರೂಪುರೇಷೆ ಕುರಿತು ಸಾರಿಗೆ ನೌಕರರ ಹೋರಾಟದ ಒಕ್ಕೂಟ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗೋಷ್ಠಿ ನಡೆಸಿದರು.
ಮೂರನೇ ದಿನದ ಸಾರಿಗೆ ನೌಕರರ ಮುಷ್ಕರ:
ಸುದ್ದಿಗೋಷ್ಠಿ ಮೂಲಕ ಸಾರಿಗೆ ನೌಕರರ ಕೂಟ ಸರ್ಕಾರಕ್ಕೆ ಒಂದಿಷ್ಟು ಮೆಸೇಜ್ ಪಾಸ್ ಮಾಡಿತು. ಸರ್ಕಾರ ವರ್ಸಸ್ ಸಾರಿಗೆ ನೌಕರರ ಜಟಾಪಟಿ ಮುಂದುವರೆದಿದ್ದು, ಅಮಾಯಕ ಪ್ರಯಾಣಿಕರು ಇನ್ನೆಷ್ಟು ದಿನ ಪರದಾಡಬೇಕು ಎನ್ನುವಂತಾಗಿದೆ.
ಸರ್ಕಾರ ಮಾತುಕತೆಗೆ ಕರೆಯೋ ತನಕ ಅನಿರ್ಧಿಷ್ಟಾವಧಿ ಮುಷ್ಕರ ಎಂದು ಸಾರಿಗೆ ನೌಕರರು ಬಿಗಿಪಟ್ಟು ಹಿಡಿದಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 1 ಕೋಟಿ ಪ್ರಯಾಣಿಕರು ನಿತ್ಯ ಬಿಎಂಟಿಸಿಯಲ್ಲಿ ಸಂಚಾರ ನಡೆಸುತ್ತಿದ್ದರು.
ಪ್ರಯಾಣಿಕರ ಸಂಕಟಕ್ಕೆ ಕಿವಿಯಾಗ್ತಿಲ್ಲ ಯಾಕೆ ಸರ್ಕಾರ ಎನ್ನುವಂತಾಗಿದ್ದು, ಬೇಡಿಕೆಗಳನ್ನ ಈಡೇರಿಸುತ್ತೇವೆ ಎನ್ನುತ್ತಿರುವ ಸರ್ಕಾರ ಹಾಗೂ ಬೇಡಿಕೆಗಳು ಇಡೇರಲೇ ಇಲ್ಲ ಎಂದು ಸಾರಿಗೆ ನೌಕರರು ಹೇಳುತ್ತಿದ್ದಾರೆ. ಸರ್ಕಾರ ವರ್ಸಸ್ ಸಾರಿಗೆ ನೌಕರರ ಒಳ ಜಗಳದಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ.
ಈ ಬಗ್ಗೆ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಾಳೆಯೂ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಸಿಎಂ, ವೈಜ್ಞಾನಿಕವಾಗಿ ಪರಿಶೀಲನೆ ಮಾಡಲಿ:
ಬೆಳಗಾವಿಯಲ್ಲಿ ನಾಳೆ ಸಾರಿಗೆ ನೌಕರರ ಸಭೆ ನಡೆಯಲಿದ್ದು ನಂತರ ಕಲಬುರಗಿಯಲ್ಲಿ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.
17ನೇ ತಾರೀಖಿಗೆ ವಿಶೇಷ ಕಾರ್ಯಕ್ರಮವನ್ನು ಸಾರಿಗೆ ನೌಕರರು ಮಾಡಲಿದ್ದು, ಸರ್ಕಾರ ಮೊಂಡುತನ ಬಿಡಬೇಕು ಎಂದರು. 13ನೇ ತಾರೀಖಿನಂದು ಕೂಡ ವಿಶೇಷ ಕಾರ್ಯಕ್ರಮವನ್ನ ಹಮ್ಮಿಕೊಳ್ಳುತ್ತೇವೆ, ಸರ್ಕಾರ ಹಠಮಾರಿ ಧೋರಣೆ ಬಿಡಲಿ ಎಂದು ಒತ್ತಾಯಿಸಿದರು.
ಸಾರಿಗೆ ಸಂಸ್ಥೆಯನ್ನೇ ತಲೆಯಲ್ಲಿಟ್ಟುಕೊಂಡು, ಶೋಷಣೆ ಮಾಡಬೇಡಿ, ಯುಗಾದಿ ಹಬ್ಬಕ್ಕೆ ಕೊಡಬೇಕಾದ ವಿಶೇಷ ಭತ್ಯೆಯೂ ಸರ್ಕಾರ ಕೊಡುತ್ತಿಲ್ಲ, ಮಾಚ್ ತಿಂಗಳ ಸಂಬಳವೂ ಕೊಡುತ್ತಿಲ್ಲ, ಸಾರಿಗೆ ನೌಕರರ ಜೀವನದ ಬಗ್ಗೆಯೂ ಗಮನ ಹರಿಸಬೇಕು ಎಂದರು.
ಜಾತಿ, ಧರ್ಮವಾರು ಹಣವನ್ನ ಕೊಡೊದು ಸಮಸ್ಯೆಗೆ ಪರಿಹಾರವಲ್ಲ. 11ನೇ ತಾರೀಖಿನಂದು ಸಾರಿಗೆ ನೌಕರರ ಕುಟುಂಬಸ್ಥರು, ರಾಜ್ಯದ ಜಿಲ್ಲಾಧಿಕಾರಿ, ತಹಶೀಲ್ ಕಚೇರಿಗೆ ತಟ್ಟೆ ಲೋಟಾ ಬಡಿದುಕೊಂಡು ಹೋಗುತ್ತಾರೆ. ಈ ಮೂಲಕ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದು ಮುಂದಿನ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಮಾತುಕತೆಗೆ ಸರ್ಕಾರ ಕರೆದಿಲ್ಲ, ನಮ್ಮನ್ನ ಮಾತುಕತೆಗೆ ಕರೆದರೆ ಹೋಗುತ್ತೇವೆ. ನನ್ನನ್ನ ಬರೋದು ಬೇಡ ಅಂದರೆ ಯಾಕೆ ಬೇಡ ಅನ್ನೋದಕ್ಕೆ ಬಲವಾದ ಕಾರಣ ಕೊಡಲಿ ಎಂದರು. ನಮ್ಮ ಚಳವಳಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದ್ದು, ಸರ್ಕಾರಕ್ಕೆ ಅರಿವು ಬರೋ ತನಕ ನಮ್ಮ ಹೋರಾಟ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.