ಬೆಂಗಳೂರು: ಹೈಕೋರ್ಟ್ ನೀಡಿರುವ ಸೂಚನೆ ಸಂಬಂಧ ನಾಳೆ ಸಭೆ ನಡೆಸಿ, ಮುಷ್ಕರ ನಡೆಸಬೇಕೋ ಅಥವಾ ಬೇಡವೋ ಎಂಬುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
14ನೇ ದಿನವೂ ಸಾರಿಗೆ ಮುಷ್ಕರ ಮುಂದುವರೆದಿದ್ದು, ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಷ್ಕರ ನಡೆಸುವುದು ಸೂಕ್ತವಲ್ಲ. ಈ ಕೂಡಲೇ ಸಾರಿಗೆ ಮುಷ್ಕರ ನಿಲ್ಲಿಸಿ, ಸೇವೆ ಆರಂಭಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದೆ ಎಂದು ವರದಿಗಳು ಬಂದಿವೆ. ಆದರೆ ಈ ಕುರಿತು ನಮಗೆ ಯಾವುದೇ ಪ್ರತಿ ಕೈಸೇರಿಲ್ಲ ಎಂದರು.
ಅಲ್ಲದೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ 4 ವಿಭಾಗಗಳಲ್ಲೂ ಹಲವು ನೌಕರರನ್ನು ಕಾರಣವೇ ಇಲ್ಲದೆ ಅಮಾನತು ಮಾಡಲಾಗಿದೆ. ಈ ಬಗ್ಗೆಯೂ ಸಂಘವು ಚರ್ಚಿಸಿದ್ದು, ನಮಗೆ ಆಗಿರುವ ಅನ್ಯಾಯದ ವಿರುದ್ಧ ಶೀಘ್ರದಲ್ಲಿಯೇ ಹೋರಾಟ ನಡೆಸಲಾಗುವುದು ಎಂದರು.
ಅಷ್ಟೇ ಅಲ್ಲದೆ ಹೈಕೋರ್ಟ್ ನೀಡಿರುವ ಅಂಶಗಳ ಬಗ್ಗೆ ವಕೀಲರೊಂದಿಗೆ ಚರ್ಚೆ ನಡೆಸಲಾಗುವುದು. ನಂತರ ಸಂಘಟನೆಯ ಪ್ರಮುಖರೊಂದಿಗೆ ಸಭೆ ನಡೆಸಿ, ಮುಷ್ಕರ ಮುಂದುವರಿಯಬೇಕೇ ಅಥವಾ ಅಂತ್ಯಗೊಳಿಸುವ ಕುರಿತು ಹೇಳಲಾಗುವುದು ಎಂದಿದ್ದಾರೆ.