ಬೆಂಗಳೂರು: ನನ್ನ ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಕೆಲಸ ಮುಗಿಸಿ ಬರುತ್ತಿದ್ದಾಗ ಕೆಲ ಅಪರಿಚಿತರು ನನ್ನ ವಾಹನ ಹಿಂಬಾಲಿಸಿದ ಘಟನೆ ನಡೆದಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮೊನ್ನೆ ತಮ್ಮ ವಾಹನವನ್ನು ಅಪರಿಚಿತರು ಹಿಂಬಾಲಿಸಿದ್ದರು. ನನ್ನ ಎಸ್ಕಾರ್ಟ್ನವರು ಅದನ್ನು ಗಮನಿಸಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಂಗಳೂರು ಕಮಿಷನರ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಹಿಂದೆಯೇ ಗೃಹ ಇಲಾಖೆ ನನಗೆ ಎಚ್ಚರಿಕೆಯಿಂದ ಇರುವಂತೆ ಹೇಳಿತ್ತು. ಈಗ ಅದು ನಿಜ ಆಗಿದೆ. ಗೃಹ ಇಲಾಖೆಗೆ ನಾನು ಕೃತಜ್ಞತೆ ತಿಳಿಸುವೆ.
ನಾನು ಯಾರ ಮೇಲೂ ಅನುಮಾನ ಪಡೋಕೆ ಹೋಗಲ್ಲ, ಜೊತೆಗೆ ದಕ್ಷಿಣ ಕನ್ನಡದಲ್ಲಿ ಜಿಲ್ಲೆಯಲ್ಲಿ ಸೌಹಾರ್ದಯುತವಾಗಿ ರಾಜಕಾರಣ ಮಾಡ್ಕೊಂಡು ಇದ್ದೀವಿ. ಒಂದು ಸಮುದಾಯ ಟಾರ್ಗೆಟ್ ಆಗ್ತಾಯಿದ್ಯಾ ಅನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕು. ವಿಷಯ ಕುರಿತು ಗೃಹ ಸಚಿವರಿಗೆ ಮಾಹಿತಿ ಕೊಡುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮಾಜಿ ಸಚಿವ ಖಾದರ್ ಕಾರು ಹಿಂಬಾಲಿಸಿದ ಪ್ರಕರಣಕ್ಕೆ ಟ್ವಿಸ್ಟ್! ಎಡವಟ್ಟಿಗೆ ಕಾರಣ ಕೊಟ್ಟ ವ್ಯಕ್ತಿ
ರಾತ್ರಿ ಕರ್ಫ್ಯೂ ಹಿಂಪಡೆದಿರುವ ಬಗ್ಗೆ ಪ್ರತಿಕ್ರಿಯಿ ಸರ್ಕಾರದಲ್ಲಿ ಎಲ್ಲವೂ ಗೊಂದಲವೇ ಆಗೋಗಿದೆ. ಮೊದಲು ಒಂದು ನಿರ್ಧಾರ ಮಾಡ್ತಾರೆ, ಆಮೇಲೆ ಆದೇಶ ವಾಪಸ್ ಪಡಿತಾರೆ. ಎಲ್ಲ ಸಂದರ್ಭದಲ್ಲೂ ಹೀಗೇ ಗೊಂದಲಕಾರಿ ನಿರ್ಧಾರ ತೆಗೆದುಕೊಳ್ತಾರೆ. ಸರ್ಕಾರ ಜನರ ಮನಸ್ಸಲ್ಲಿ ಸಂಶಯ ಉಳಿಯುವಂತೆ ಮಾಡಬಾರದು. ಜನರ ಸಂಶಯಗಳನ್ನು ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು.
ಹೊಸ ತಳಿಯ ಕೊರೊನಾ ಯಾವಾಗ ಸ್ಫೋಟಗೊಳ್ಳತ್ತೆ ಗೊತ್ತಿಲ್ಲ. ಆದರೆ, ಸರ್ಕಾರ ಹಳೆ ಕೋವಿಡ್ ಕೇರ್ ಸೆಂಟರ್ಗಳನ್ನು ಯೋಚನೆ ಮಾಡದೆ ಕ್ಲೋಸ್ ಮಾಡಿತು. ಈಗ ಜನ ಎಲ್ಲಿಗೆ ಹೋಗಬೇಕು? ಏನು ಚಿಕಿತ್ಸೆ ಪಡೆದುಕೊಳ್ಳಬೇಕು? ಅನ್ನೋದೇ ಗೊಂದಲ ಆಗ್ತಿದೆ ಎಂದಿದ್ದಾರೆ.