ಬೆಂಗಳೂರು : ಕೋವಿಡ್ ತಂದೊಡ್ಡಿರುವ ಸಂಕಷ್ಟ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಶೀಘ್ರದಲ್ಲೇ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್)ದಿಂದ ಹಾಲಿನ ದರ ಏರಿಕೆ ಬಿಸಿ ತಟ್ಟಲಿದೆ.
ಕೆಎಂಎಫ್ ಲೀಟರ್ ಹಾಲಿನ ದರ 3 ರೂ. ಏರಿಕೆ ಮಾಡಲು ಮುಂದಾಗಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಈ ವಾರದಲ್ಲೇ ನಡೆಯಲಿರುವ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಹೊರ ಬೀಳಲಿದೆ.
ಜ.13ರಂದು ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಲಿನ ದರ ಏರಿಕೆ ಮಾಡುವ ಸಂಬಂಧ ಪ್ರಸ್ತಾಪ ಮಾಡಲಾಗಿತ್ತು. ಒಕ್ಕೂಟಗಳ ಜತೆ ಸಭೆಯ ಬಳಿಕ ಸಿಎಂ ಬೊಮ್ಮಾಯಿಯೊಂದಿಗೆ ಚರ್ಚಿಸುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದರು.
10 ರೂ ದರ ಕಡಿಮೆ : ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಕರ್ನಾಟಕದಲ್ಲಿ 8 ರಿಂದ 10 ರೂ. ಕಡಿಮೆ ಇದೆ. ಪ್ರತಿ ಲೀಟರ್‌ಗೆ 3 ರೂ. ದರ ಏರಿಕೆ ಮಾಡುವಂತೆ ಅಧ್ಯಕ್ಷರಿಗೆ 14 ಹಾಲು ಒಕ್ಕೂಟಗಳು ಮನವಿ ಮಾಡಿವೆ. ಈ ಹಿನ್ನೆೆಲೆ ಹಾಲಿನ ದರ ಏರಿಕೆ ಮಾಡುವ ಕುರಿತು ಸಿಎಂ ಜೊತೆ ಚರ್ಚಿಸಿ ಗ್ರೀನ್ ಸಿಗ್ನಲ್ ಸಿಕ್ಕಿದ ತಕ್ಷಣ ಹಾಲಿನ ದರ ಏರಿಕೆ ಖಚಿತ ಎನ್ನಲಾಗುತ್ತಿದೆ.
ವೆಚ್ಚಗಳಲ್ಲಿ ಹೆಚ್ಚಳ : ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಬೆಲೆ ಏರಿಕೆಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವಾರದಲ್ಲೇ ದರ ಹೆಚ್ಚಳ : ಈ ವಾರದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಖಚಿತವಾಗಿ ತಿಳಿಯಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಸತೀಶ್ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಪ್ರವಾಸದದಿಂದ ಬಂದ ಕೂಡಲೇ ಚರ್ಚೆ : ಕೆಎಂಎಫ್ ಅಧ್ಯಕ್ಷರು ಬೆಳಗಾವಿ ಪ್ರವಾಸದದಿಂದ ಬಂದ ಕೂಡಲೇ ಸಿಎಂ ಜತೆ ಚರ್ಚಿಸುತ್ತೇವೆ. ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾಪ ಇಟ್ಟಿದ್ದೇವೆ. ಹಾಲು ಒಕ್ಕೂಟಗಳ ಮನವಿಯ ಕುರಿತು ಸಿಎಂ ಮುಂದೆ ಪ್ರಸ್ತಾಪ ಮಾಡುತ್ತೇವೆ. ಆದರೆ, ಸರ್ಕಾರ ದರ ಹೆಚ್ಚಳ ಮಾಡಲು ಅನುಮತಿ ನೀಡಿತ್ತದಾ, ಇಲ್ಲವಾ? ಎಂದು ಕಾದು ನೋಡಬೇಕಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಹೋಂ ಐಸೋಲೇಷನ್ ಅವಧಿಯಲ್ಲಿ 3 ದಿನಗಳ ಕಡಿತ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ