ಬೆಂಗಳೂರು: ಪತ್ನಿಯನ್ನು ಕತ್ತು ಹಿಸುಕಿ ಕೊಂದು, ತಾನೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಯಾರಿಗೂ ಅನುಮಾನ ಬರದಂತೆ ಕಥೆ ಹೇಳಿದ್ದ ಆರೋಪಿ ಪತಿಯನ್ನ ಬೆಂಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಎಚ್ ಬಿಆರ್ ಲೇಔಟ್ನಲ್ಲಿ ವಾಸವಿದ್ದ ಸಿದ್ದಪ್ಪ ಬಸವರಾಜ್ ಎಂಬ ಆರೋಪಿಯನ್ನು ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ತನ್ನ ಹೆಂಡ್ತಿ ಕೆಂಚಮ್ಮಳನ್ನು ನಿನ್ನೆ ತಡರಾತ್ರಿ ಹತ್ಯೆ ಮಾಡಿದ ಆರೋಪದಡಿ ತನಿಖೆ ಮುಂದುವರಿಸಿದ್ದಾರೆ.
ವಿಜಯಪುರ ಮೂಲದ ದಂಪತಿ ಕಳೆದ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ನಗರದಲ್ಲಿ ನೆಲೆಯೂರಿದ್ದ ಗಂಡ - ಹೆಂಡತಿ ಹೇಗೋ ಜೀವನ ನಡೆಸುತ್ತಿದ್ದರು. ವಿವಾಹದ ಆರಂಭದಲ್ಲೇ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರು ನಡುವೆ ವೈಮನಸ್ಸು ಮೂಡಿತ್ತು. ದಿನೆ ದಿನೇ ಇಬ್ಬರ ನಡುವಿನ ಜಗಳ ಹೆಚ್ಚಾಗಿತ್ತು. ನಿನ್ನೆ ಸಹ ದಂಪತಿ ನಡುವೆ ಕಿರಿಕ್ ಆಗಿದೆ. ಇದೇ ಕೋಪದಲ್ಲಿ ಹೆಂಡ್ತಿ ಮೇಲೆ ಆರೋಪಿ ಹಲ್ಲೆ ಮಾಡಿ ಕತ್ತು ಹಿಸುಕಿ ಸಾಯಿಸಿದ್ದಾನೆ. ಆತಂಕಗೊಂಡ ಸಿದ್ದಪ್ಪ, ಹತ್ಯೆ ವಿಷಯ ತಿಳಿದರೆ ಪೊಲೀಸರು ಬಂಧಿಸುತ್ತಾರೆ ಎಂದು ಭಾವಿಸಿ ತಾನೇ ಹೆಂಡತಿಯನ್ನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಕ್ರೈಂ ಸೀನ್ ಕ್ರಿಯೆಟ್ ಮಾಡಿದ್ದಾನೆ.
ಸಂಬಂಧಿಕರಿಗೆ ಪೋನಾಯಿಸಿ ನನ್ನ ಹೆಂಡ್ತಿ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಕಥೆ ಹೇಳಿದ್ದ. ತನ್ನ ಮೇಲೆ ಅನುಮಾನ ಬರದಿರಲು ಪೊಲೀಸರಿಗೂ ಕರೆ ಮಾಡಿ ಮಾಹಿತಿ ನೀಡಿದ್ದ. ಇಂದು ಮುಂಜಾನೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಸಿದ್ದಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಹತ್ಯೆ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಎದುರು ತಪ್ಪೊಪ್ಪಿಕೊಂಡ ಆರೋಪಿ: ’’ಹೆಂಡ್ತಿ ನೇಣುಬಿಗಿದುಕೊಂಡಿದ್ದಾಳೆ ಎಂದು ಆರೋಪಿಯಿಂದ ಮಾಹಿತಿ ಬಂದ ಬೆನ್ನಲೇ ಸ್ಥಳಕ್ಕೆ ಪೊಲೀಸರು ಹೋಗುವಷ್ಟರಲ್ಲಿ ಸಂಬಂಧಿಕರ ಸಹಾಯದಿಂದ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದನು. ಸಿದ್ದಪ್ಪ ಹೇಳಿಕೆ ಆಧರಿಸಿ ಮೃತಪಟ್ಟ ಜಾಗವನ್ನು ಪೊಲೀಸರು ಪರಿಶೀಲಿಸಿ ಪ್ರಶ್ನಿಸಿದಾಗ ಅಸ್ವಾಭಾವಿಕವಾಗಿ ಉತ್ತರಿಸಿದ್ದನು. ಅನುಮಾನಗೊಂಡು ಪೊಲೀಸರ ಶೈಲಿಯಲ್ಲಿ ಮತ್ತೆ ಪ್ರಶ್ನಿಸಿದ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿನ್ನೆ ರಾತ್ರಿ ಕುಡಿದು ಬಂದಿದ್ದ ಸಿದ್ದಪ್ಪ ಹೆಂಡ್ತಿ ಜೊತೆ ಜಗಳ ಮಾಡಿಕೊಂಡಿದ್ದನು.ಈ ವೇಳೆ ಕೋಪದಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಬಂಧನ ಭೀತಿಯಿಂದ ಕಿಟಕಿಗೆ ಹಗ್ಗ ಕಟ್ಟಿದ್ದ ಆತನು ತನ್ನ ಹೆಂಡ್ತಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮನೆ ಮಾಲೀಕನ ಪತ್ನಿಗೆ ಕರೆ ಮಾಡಿ ಮಾಹಿತಿ ನೀಡಿದ್ದನು‘‘ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಇದನ್ನೂಓದಿ: ತುಮಕೂರು: ಊರ ಹೊರಗಿನ ಗುಡಿಸಲಿನಲ್ಲಿ ಇರಿಸಲಾಗಿದ್ದ ಮಗು ಸಾವು; ಮೂಢನಂಬಿಕೆಗೆ ಕಂದಮ್ಮ ಬಲಿ!