ಬೆಂಗಳೂರು: ಕೆಲ ವರ್ಷಗಳ ಹಿಂದೆ ಆರ್.ಎಸ್.ಎಸ್. ಶಿಬಿರದಲ್ಲಿ ಪಾಲ್ಗೊಳ್ಳುವ ಕುರಿತು ದಿ.ಡಾ.ಪ್ರಣಬ್ ಮುಖರ್ಜಿ
ಕೈಗೊಂಡಿದ್ದ ನಿರ್ಧಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಅಸಹನೆಗೆ ಬಿಜೆಪಿ ಅಚ್ಚರಿ ವ್ಯಕ್ತಪಡಿಸಿದೆ.
ನಗರದ ಆರ್.ಎಸ್.ಎಸ್ ಪ್ರಧಾನ ಕಚೇರಿಯಲ್ಲಿ ನಡೆದ ಮೂರನೇ ವರ್ಷದ ಅಧಿಕಾರಿಗಳ ತರಬೇತಿ ಶಿಬಿರ (ಒಟಿಸಿ)ದಲ್ಲಿ ಮಾಜಿ ರಾಷ್ಟ್ರಪತಿಗಳು ಭಾಷಣ ಮಾಡಿದ ಬಗ್ಗೆ ತಮಗಿದ್ದ ಅಸಮಾಧಾನವನ್ನು ಮರೆಮಾಚಲು ಮಂಗಳವಾರ ನಡೆದ ಸಂತಾಪ ಸೂಚಕ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಲೇ ಇಲ್ಲ. ಸಂಘ ಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳುವ ನಿರ್ಧಾರ ಮೂಲಕ ಭಾರತದ ಮಾಜಿ ರಾಷ್ಟ್ರಪತಿಯವರು ಎರಡು ವಿಭಿನ್ನ ಸಂದೇಶಗಳನ್ನು ಆರ್.ಎಸ್.ಎಸ್ ಮತ್ತು ಕಾಂಗ್ರೆಸ್ ಎರಡಕ್ಕೂ ನೀಡಿದ್ದಾರೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ ಎಂದು ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣದಿಂದ, ಹುಸಿ ಜಾತ್ಯಾತೀತ ಧೋರಣೆ ಅನುಸರಣೆಯಿಂದ ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಕುಗ್ಗಿಸುವ ಹಾಗೂ ರಾಷ್ಟ್ರೀಯ ಚಾರಿತ್ಯ ದೇಶದ ಹಳೆಯ ರಾಜಕೀಯ ಪಕ್ಷದಲ್ಲಿ ಇಲ್ಲದಿರುವ ಬಗ್ಗೆ ತಾವು ಬೇಸತ್ತಿರುವುದನ್ನು ಡಾ.ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸ್‌ಗೆ ತಿಳಿಯಪಡಿಸುವ ಮತ್ತು ಆರ್.ಎಸ್.ಎಸ್.ನಲ್ಲಿ ತಾವು ಅಂಥ ಸ್ವಾಭಾವಿಕ ನೆಲೆ ಕಂಡು ಕೊಂಡಿರುವುದನ್ನು ವ್ಯಕ್ತಪಡಿಸುವುದು ಡಾ.ಮುಖರ್ಜಿ ಉದ್ದೇಶವಾಗಿತ್ತು ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ ಎಂದು ಕಾರ್ಣಿಕ್ ತಿಳಿಸಿದ್ದಾರೆ.
ಡಾ.ಪ್ರಣಬ್ ಮುಖರ್ಜಿ ಅವರು ಪ್ರತಿಯೊಬ್ಬ ವ್ಯಕ್ತಿಯಲ್ಲಿ ರಾಷ್ಟ್ರ ಚಾರಿತ್ರ್ಯ ಬೆಳೆಸುವ ಮತ್ತು ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ನಿಸ್ವಾರ್ಥವಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಜನರಿಗೆ ತರಬೇತಿ ನೀಡುವ ಆರ್.ಎಸ್.ಎಸ್‌ನ ರಾಷ್ಟ್ರೀಯತೆಯ ಸಿದ್ಧಾಂತವನ್ನು ತಾವು ಒಪ್ಪಿರುವುದಾಗಿ ಸ್ಪಷ್ಟವಾಗಿ ಹೇಳಲು ಉದ್ದೇಶಿಸಿದ್ದರು. ನೈಜ ರಾಷ್ಟ್ರೀಯವಾದಿ ಮತ್ತು ನಿಜ ದೇಶಭಕ್ತರಾಗಿದ್ದರು, ಆರ್.ಎಸ್.ಎಸ್.ನ ಸಿದ್ದಾಂತ ಮತ್ತು ಅದು ಅಳವಡಿಸಿಕೊಂಡಿರುವ ವಿಧಾನಗಳು ರಾಷ್ಟ್ರೀಯ ಪುನರುತ್ಥಾನವನ್ನು ಖಾತ್ರಿಪಡಿಸಲು ಸೂಕ್ತ ಮಾರ್ಗವೆಂಬುದನ್ನು ಅರಿತಿದ್ದರು. ಹೀಗಾಗಿಯೇ ಅವರು ಆರ್.ಎಸ್.ಎಸ್.ನ 3ನೇ ವರ್ಷದ ಒಟಿಸಿ ಶಿಬಿರದಲ್ಲಿ ಭಾಗವಹಿಸಿದ್ದರು ಎಂದಿದ್ದಾರೆ.
ಇಂದಿನ ಕಾಂಗ್ರೆಸ್ ನಾಯಕರು ಕೂಡ ರಾಷ್ಟ್ರೀಯ ಜೀವನದಲ್ಲಿ ಆರ್.ಎಸ್.ಎಸ್.ನ ಮಹತ್ವವನ್ನು ಅರಿತುಕೊಳ್ಳುತ್ತಾರೆ ಮತ್ತು ನೈಜ ರಾಷ್ಟ್ರೀಯವಾದಿ ಸಂಘಟನೆಯ ಬಗ್ಗೆ ತಮಗಿರುವ ದ್ವೇಷಾಸೂಯೆಗಳನ್ನು ಕೊನೆಗೊಳಿಸುತ್ತಾರೆ ಎಂದು ಬಿಜೆಪಿ ಆಶಿಸಿದೆ ಎಂದು ಕ್ಯಾ.ಗಣೇಶ್ ಕಾರ್ಣಿಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.