ಬೆಂಗಳೂರು: ಸರ್ಕಾರ ತಪ್ಪು ಮಾರ್ಗದಲ್ಲಿ ನಡೆಯುತ್ತಿರುವುದನ್ನು ಪ್ರಶ್ನಿಸಿದರೆ ಕೊಲೆ ಬೆದರಿಕೆ ಬರುವ ಪರಿಸ್ಥಿತಿ ಎದುರಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಭಾಷಣದ ಕುರಿತು ಪ್ರತಿಕ್ರಿಯಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ. ಅಪರಿಚಿತನೊಬ್ಬ ಕರೆ ಮಾಡಿ, 'ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ನಿಮ್ಮನ್ನು ಬಿಡಲ್ಲ. ನಾವು ನಿಮ್ಮನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ' ಎಂದು ಬೆದರಿಸಿದ್ದಾನೆ. ಅಲ್ಲದೆ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರ ತಪ್ಪು ಮಾರ್ಗದಲ್ಲಿ ನಡೆಯುವಾಗ ಎಚ್ಚರಿಸುವ ಕೆಲಸ ವಿರೋಧ ಪಕ್ಷಗಳದ್ದು. ಆದರೆ, ಕೃಷಿ ಕಾಯ್ದೆ ವಿಚಾರದಲ್ಲಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದಕ್ಕೆ ಕರೆ ಮಾಡಿ ಬೆದರಿಕೆ ಒಡ್ಡುವ ಪ್ರಯತ್ನ ಮಾಡುತ್ತಾರೆ ಎಂದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರತಿ ಪಕ್ಷದ ನಾಯಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು? ಇದಕ್ಕೆ ನರೇಂದ್ರ ಮೋದಿ ಅವರೇ ಉತ್ತರ ಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮತ ವಿಭಜನೆಗೆ ಆಗ್ರಹಿಸಿ ಪರಿಷತ್ನಲ್ಲಿ ಕಾಂಗ್ರೆಸ್ ಪ್ರತಿಭಟನೆ: ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಜಾತ್ಯತೀತ ಸಿದ್ಧಾಂತ ಮರೆಯುವುದು ಜೆಡಿಎಸ್ಗೆ ಹೊಸದಲ್ಲ. ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಜೊತೆ ಕೈಜೋಡಿಸಿರುವ ಜೆಡಿಎಸ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಅಧಿಕಾರಕ್ಕಾಗಿ ಜಾತ್ಯಾತೀತ ಸಿದ್ಧಾಂತಗಳನ್ನು ಮರೆಯುವುದು ಜೆಡಿಎಸ್ಗೆ ಇದೇನೂ ಹೊಸತಲ್ಲ. ಬಸವರಾಜ್ ಹೊರಟ್ಟಿ ಅವರನ್ನು ಪರಿಷತ್ತಿನ ಸಭಾಪತಿಯನ್ನಾಗಿ ಮಾಡಲು ಕುಮಾರಸ್ವಾಮಿ ಮತ್ತು ದೇವೇಗೌಡರು ಈ ರೀತಿ ತೆರೆಮರೆಯ ರಾಜಕಾರಣ ಮಾಡಬೇಕಾಗಿರಲಿಲ್ಲ. ಜೆಡಿಎಸ್ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿದ್ದರೆ ಆಗುತ್ತಿತ್ತು ಎಂದರು.
ತಮ್ಮದು ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಜೆಡಿಎಸ್ ಇವತ್ತು ಕೋಮುವಾದಿ ಬಿಜೆಪಿ ಜತೆ ಸೇರಿ ಜಾತ್ಯಾತೀತ ಸಿದ್ಧಾಂತಗಳನ್ನು ಗಾಳಿಗೆ ತೂರಿದೆ. ಕಾಂಗ್ರೆಸ್ನ ಅಲ್ಪಸಂಖ್ಯಾತ ಅಭ್ಯರ್ಥಿ ನಜೀರ್ ಅಹಮದ್ ಅವರನ್ನು ಸೋಲಿಸಲು ಜಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಇಷ್ಟು ದಿನ ತೆರೆಮರೆಯಲ್ಲಿ ಹೊಂದಾಣಿಕೆ ನಾಟಕವಾಡುತ್ತಿದ್ದ ಬಿಜೆಪಿ-ಜೆಡಿಎಸ್ ಮುಖವಾಡ ಇವತ್ತು ಬಯಲಾಗಿದೆ. ಪರಿಷತ್ ಸಭಾಪತಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡ ಜೆಡಿಎಸ್ ತಾನು ಬಿಜೆಪಿಯ 'ಬಿ' ಟೀಂ ಎಂದು ಮತ್ತೊಮ್ಮೆ ಖಚಿತಪಡಿಸಿದೆ ಎಂದು ಹೇಳಿದ್ದಾರೆ.
ಇನ್ನಾದರೂ ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರು ಜೆಡಿಎಸ್ನ ಬೂಟಾಟಿಕೆ ರಾಜಕಾರಣವನ್ನು ನಂಬಬಾರದು. ಇದುವರೆಗೆ ಜೆಡಿಎಸ್ ಪಕ್ಷದ ನಾಯಕರು ಜಾತ್ಯಾತೀತತೆಯ ಹೆಸರಲ್ಲಿ ನಿಮ್ಮನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಾತ್ರ ಬಳಸಿಕೊಂಡಿದ್ದಾರೆ. ಅವರ ಅಸಲಿ ಮುಖ ಇವತ್ತು ಬಯಲಾಗಿದೆ ಎಂದಿದ್ದಾರೆ.