ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬವನ್ನು ಬೆಂಗಳೂರು ವೀರಶೈವ ಮಹಾಸಭದ ಅವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವೀರಶೈವ ಲಿಂಗಾಯತ ನಿಗಮ ಪ್ರಾರಂಭಕ್ಕೆ ಒತ್ತಾಯ ಮಾಡಿದರು. ವೀರಶೈವ ಲಿಂಗಾಯತ ನಿಗಮ ಸ್ಥಾಪನೆಯ ಬಗ್ಗೆ ಇಂದು ನಿನ್ನೆಯಿಂದ ಬೇಡಿಕೆ ಇಡುತ್ತಿಲ್ಲ. ಇದು ಲಿಂಗಾಯತ ಸಮುದಾಯದ ಬಹುದಿನಗಳ ಬೇಡಿಕೆಯಾಗಿದೆ ಎಂದರು.
ಹಿಂದಿನ ಎಲ್ಲಾ ಸರ್ಕಾರಗಳಿಗೆ ಈ ಸಂಬಂಧ ಒತ್ತಾಯ ಮಾಡುತ್ತಾ ಬಂದಿದ್ದು, ಈಗಿನ ಬಿಜೆಪಿ ಸರ್ಕಾರಕ್ಕೂ ನಾವು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ಸಮುದಾಯದವರಾಗಿದ್ದು, ನಿಗಮ ಸ್ಥಾಪನೆಗೆ ಆಸಕ್ತಿ ತೋರಿಸಬೇಕು ಎಂದರು. ಇದೇ ಸಂದರ್ಭ ಮಾಜಿ ಸಚಿವರೂ ಆಗಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.