ಬೆಂಗಳೂರು: ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಅರ್ಜಿ ಸಲ್ಲಿಕೆಗೆ ಜೂನ್ 20 ಕಡೆಯ ದಿನವಾಗಿತ್ತು. ಆದರೆ, ಜೂನ್ 24 ರಂದೂ ಕೂಡ ಪ್ರಶಸ್ತಿಗಾಗಿ ಅರ್ಜಿಗಳು ಬರುತ್ತಿವೆ. ಪ್ರಶಸ್ತಿ ಅರ್ಜಿಗಳ ಸಂಖ್ಯೆ 450ಕ್ಕೂ ಹೆಚ್ಚಿದೆ.
ಬಿಬಿಎಂಪಿಯಿಂದ ಪ್ರತಿವರ್ಷ ಕೆಂಪೇಗೌಡ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೊಡಲಾಗುತ್ತದೆ. ಬೆಂಗಳೂರಿನಲ್ಲಿ ನಡೆಯುವ ಕೆಂಪೇಗೌಡ ಜಯಂತಿಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಬೇಕಾಬಿಟ್ಟಿಯಾಗಿ ಪ್ರಶಸ್ತಿ ನೀಡದೇ, ತಜ್ಞರ ಸಮಿತಿ ರಚಿಸಿ, ಅಲ್ಲಿ ಆಯ್ಕೆಯಾದ 100 ಮಂದಿ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡುವ ತೀರ್ಮಾನವನ್ನು ಬಿಬಿಎಂಪಿ ಮಾಡಿದೆ.
ಉಪಮುಖ್ಯಮಂತ್ರಿ ಸೂಚಿಸಿದ ಮೂವರು ತಜ್ಞರ ಸಮಿತಿ ನಿರ್ಣಯದಂತೆ ಪ್ರಶಸ್ತಿ ಕೊಡಲಾಗುವುದು ಎಂದು ಮೇಯರ್ ಗಂಗಾಬಿಕೆ ಹೇಳಿದ್ದಾರೆ. ಆದರೆ, ಪ್ರಶಸ್ತಿ ನೀಡಲು ವಿವಿಧ ಕಡೆಗಳಿಂದ ಸಾಕಷ್ಟು ಒತ್ತಡಗಳು ಬರುತ್ತಿದ್ದು, ನಿಗದಿಯಂತೆ ಪ್ರಶಸ್ತಿಗಳನ್ನು ನೀಡುತ್ತಾರೋ ಅಥವಾ ನೂರರ ಗಡಿದಾಟಲಿದೆಯೋ ಎಂಬುದು ಕಾದು ನೋಡಬೇಕಿದೆ.