ಬೆಂಗಳೂರು : ನರೇಗಾ ಯೋಜನೆಯಡಿ ಕೂಲಿ ಬೇಡಿಕೆ ಸರಳೀಕರಣದ 'ಕಾಯಕ ಮಿತ್ರ ಆ್ಯಪ್' ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಬಿಡುಗಡೆ ಮಾಡಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚಿನ ಕೂಲಿಕಾರರು ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಏಪ್ರಿಲ್ ತಿಂಗಳಿನಿಂದ ಕೂಲಿ ದರವನ್ನು 249 ರೂ.ನಿಂದ 275 ರೂ. ಹೆಚ್ಚಳ ಮಾಡಲಾಗಿದ್ದು, ಕೂಲಿಗಾಗಿ ಬೇಡಿಕೆ ಸಲ್ಲಿಸುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಹಾಗೂ ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ನೇರವಾಗಿ ತೆರಳಿ ಬೇಡಿಕೆಯನ್ನು ಸಲ್ಲಿಸುವಲ್ಲಿ ಜನರಿಗೆ ಸಮಸ್ಯೆ ಉಂಟಾಗಿರುವುದನ್ನು ಇಲಾಖೆಯು ಮನಗಂಡಿದ್ದು, ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಇಲಾಖೆಯು 'ಕಾಯಕ ಮಿತ್ರ ಆ್ಯಪ್'ನ್ನು ಅಭಿವೃದ್ಧಿಪಡಿಸಿದೆ.
ಈ ಆ್ಯಪ್ ಮೂಲಕ ಕೂಲಿಕಾರರು ಸ್ವತಃ ಅಥವಾ ಬಿಎಫ್‌ಟಿ/ಕಾಯಕ ಬಂಧು/ಕಾರ್ಮಿಕ ಸಂಘಟನೆಗಳು/ ಸ್ಮಾರ್ಟ್ ಫೋನ್ ಬಳಸುವ ವ್ಯಕ್ತಿಯ ನೆರವಿನ ಮೂಲಕ ಕಾಯಕ ಮಿತ್ರ ಆ್ಯಪ್ನಲ್ಲಿ ಕೂಲಿ ಬೇಡಿಕೆಯನ್ನು ಸಲ್ಲಿಸಲು ಅವಕಾಶ ಒದಗಿಸಿದೆ.
ರೈತರು/ದುರ್ಬಲವರ್ಗ/ಪ.ಜಾತಿ, ಪ.ಪಂಗಡದ ಅರ್ಹ ಫಲಾನುಭವಿಗಳು ತಮ್ಮ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿ ಬೇಡಿಕೆಯನ್ನು ಸಹ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಆ್ಯಪ್ ಅನ್ನು rdpr.kar.nic.in/end2endmgnrega.co.in ವೆಬ್ ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಆ್ಯಪ್ನ ವೈಶಿಷ್ಟತೆಗಳೇನು? :
- ಕೂಲಿ ಬೇಡಿಕೆ ಸಲ್ಲಿಸಲು ಲಾಗಿನ್ ನೋಂದಣಿಯ ಅವಶ್ಯಕತೆ ಇರುವುದಿಲ್ಲ.
- ಕೂಲಿ ಬೇಡಿಕೆಯನ್ನು ಒಂದು ಬಾರಿಗೆ 15 ದಿವಸದವರೆಗೆ ಕೋರಬಹುದು.
- ಕೆಲಸ ಕೋರುವ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಚೀಟಿ ಹೊಂದಿರಬೇಕು.
- ಅರ್ಹ ಫಲಾನುಭವಿಗಳು ನರೇಗಾ ಯೋಜನೆಯಡಿ ಕೃಷಿ ಹೊಂಡ, ಬದು ನಿರ್ಮಾಣ. ತೋಟಗಾರಿಕೆ, ರೇಷ್ಮೆ, ಕೃಷಿ ಅರಣ್ಯ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಬಹುದು.