ಬೆಂಗಳೂರು: ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ರಮೇಶ್ ಕತ್ತಿ ಹೆಸರನ್ನೂ ಶಿಫಾರಸು ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕತ್ತಿ ಸಹೋದರರು ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಧನ್ಯವಾದ ಸಲ್ಲಿಸಿದರು.
ಬೆಳಗ್ಗೆ ವಾಕಿಂಗ್ ಮಾಡುತ್ತಿರುವ ವೇಳೆ ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿದ್ದ ಹಿರಿಯ ಶಾಸಕ ಉಮೇಶ್ ಕತ್ತಿ ಅವರ ರಮೇಶ್ ಕತ್ತಿ ಹಾಗೂ ಮಾಜಿ ಸಚಿವ ಹಾಗೂ ಶಾಸಕ ಮುರುಗೇಶ್ ನಿರಾಣಿ ಪುಷ್ಪಗುಚ್ಛ ನೀಡಿ ತಮ್ಮ ಬೇಡಿಕೆ ಈಡೇರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಬಂಡಾಯದ ಮೂಲಕ ಬೇಡಿಕೆ ಈಡೇರಿಸಿಕೊಂಡ ಕತ್ತಿ ಬ್ರದರ್ಸ್:
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಉಮೇಶ್ ಕತ್ತಿ ಮತ್ತು ಮುರುಗೇಶ್ ನಿರಾಣಿ ಮತ್ತು ಕೆಲ ಶಾಸಕರು ಭೋಜನ ಕೂಟ ಏರ್ಪಡಿಸಿ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಬಂಡಾಯದ ರಣಕಹಳೆ ಮೊಳಗಿಸಿದ್ದರು. ಕತ್ತಿ ಸಹೋದರರ ಬಂಡಾಯಕ್ಕೆ ಕಡೆಗೂ ಪ್ರತಿಫಲ ಸಿಕ್ಕಿದ್ದು, ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಬಿಜೆಪಿ ಕೋರ್ ಕಮಿಟಿ ಶಿಫಾರಸು ಮಾಡಿದೆ. ಜೊತೆಗೆ ಮುರುಗೇಶ್ ನಿರಾಣಿ ಗ್ರೂಪ್ಗೆ ಮಂಡ್ಯ ಜಿಲ್ಲೆ ಪಾಂಡವಪುರದ ಸಹಕಾರಿ ಸಕ್ಕರೆ ಕಾರ್ಖಾನೆ 40 ವರ್ಷದ ಮಟ್ಟಿಗೆ ಗುತ್ತಿಗೆ ಸಿಕ್ಕಿದೆ.