ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 106ನೆಯ ಹಾಗೂ 2021-22ನೆಯ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಾರ್ಚ್ 26ರ ಭಾನುವಾರ ಬೆಳಗ್ಗೆ 11 ಗಂಟೆಗೆ ವಿಜಯಪುರ ಜಿಲ್ಲೆಯ ಸ್ಟೇಷನ್ ರಸ್ತೆಯಲ್ಲಿರುವ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಡಾ.ಪದ್ಮಿನಿ ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
106ನೆಯ ಹಾಗೂ 2021-22ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದಿನಾಂಕ 1-5-2022 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯ ನಡೆವಳಿಗಳ ದೃಢೀಕರಣಗೊಳಿಸುವುದು, 2021-22ನೆಯ ಸಾಲಿನ ಲೆಕ್ಕಪರಿಶೋಧಿತವಾದ (ಆಡಿಟ್ ಆದ) ವಾರ್ಷಿಕ ಲೆಕ್ಕ ಪತ್ರಗಳ ಮಂಡನೆಮಾಡುವುದು, 2022-23ರ ಸಾಲಿನ ವಾರ್ಷಿಕ ಆಯವ್ಯಯದ ಕುರಿತು ಚರ್ಚಿಸಿ ವಾರ್ಷಿಕ ಸಾಮಾನ್ಯ ಸಭೆಯ ಅನುಮೋದಿಸುವ ಬಗ್ಗೆ ಮಂಡಿಸುವುದು, 2022-23ರ ಸಾಲಿನ ಹಣಕಾಸಿನ ವರ್ಷಕ್ಕೆ ಲೆಕ್ಕಪರಿಶೋಧಕರ ನೇಮಕಾತಿ ಮತ್ತು ಅವರ ಸಂಭಾವನೆ ನಿಗದಿಪಡಿಸುವುದು, 2022-23ನೇ ಸಾಲಿನ ಕ್ರಿಯಾಯೋಜನೆಗಳಿಗೆ ತಗಲುವ ವೆಚ್ಚಕ್ಕೆ ಅನುಮೋದನೆ ನೀಡುವುದು, ಸದಸ್ಯರ ವಿರುದ್ಧ ಶಿಸ್ತು ವಿಚಾರಣಾ ವರದಿಗಳನ್ನು ಮಂಡಿಸುವುದು, 2022-23ರ ಸಾಲಿನ ಕಾರ್ಯಕಾರಿ ಸಮಿತಿಯು ತಯಾರಿಸಿದ ಪರಿಷತ್ತಿನ ಕಾರ್ಯಚಟುವಟಿಕೆಗಳ ಯೋಜನೆಗಳ ಮಂಡಿಸುವುದು, ಸದಸ್ಯರು ನಿಯಮಾನುಸಾರವಾಗಿ ಕಳುಹಿಸಿರುವ ಇತರೆ ಸೂಚನೆಗಳ ಬಗ್ಗೆ ಚರ್ಚಿಸುವುದು ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸಬಹುದಾದ ಇನ್ನಿತರೆ ವಿಷಯಗಳ ಕುರಿತು 2021-2022ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಸಾಪ ಅಧ್ಯಕ್ಷರ ಹೇಳಿಕೆ: ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹೇಳಿಕೆ ನೀಡಿದ್ದು, ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆಯ ಕುರಿತು ಪ್ರಕಟಣೆಯನ್ನು ಪರಿಷತ್ತು ಪ್ರಕಟಿಸುವ ಕನ್ನಡ ನುಡಿ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಸರ್ವ ಸದಸ್ಯರಿಗೂ ನೀಡಲಾಗುತ್ತಿತ್ತು. ಆದರೆ, ಈ ಬಾರಿ ʻಕನ್ನಡ ಸಾಹಿತ್ಯ ಪರಿಷತ್ತಿನ ನಿಯಮ-ನಿಬಂಧನೆ (30 ರ) ಪ್ರಕಾರʼ ಪರಿಷತ್ತಿಗೆ ಆಗುವ ಆರ್ಥಿಕ ಹೊರೆ ತಪ್ಪಿಸುವ ಹಾಗೂ ಪರಿಷತ್ತಿನಲ್ಲಿ ಕಾಗದ ರಹಿತ ಆಡಳಿತ ಮಾಡಿರುವ ಹಿನ್ನೆಲೆಯಲ್ಲಿ 2021-2022ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಪ್ರಕಟಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ಸೈಟ್ ಮೂಲಕ, ಆ್ಯಪ್ ಮೂಲಕ, ಪರಿಷತ್ತಿನ ಎಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಮಾಡಲಾಗುತ್ತಿದೆ.
ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಸೇರಿದಂತೆ ಎಲ್ಲಾ ಜಿಲ್ಲಾ, ತಾಲ್ಲೂಕು ಮತ್ತು ಅಸ್ತಿತ್ವದಲ್ಲಿರುವ ಹೋಬಳಿ ಹಾಗೂ ಗಡಿನಾಡು ಘಟಕಗಳ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನಾಗಿಸುವ ನಿಟ್ಟಿನಲ್ಲಿ ಹಲವಾರು ತಂತ್ರಜ್ಞಾನವನ್ನು ಬಳಸುವ ಮೂಲಕ ಸಾಮಾನ್ಯ ಜನರು ಸಹ ಪರಿಷತ್ತಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗಮನಿಸಿ ಸಕ್ರಿಯವಾಗಿ ಭಾಗವಹಿಸಬೇಕು, ಎನ್ನುವುದು ಪರಿಷತ್ತಿನ ಉದ್ದೇಶವಾಗಿದೆ.
ಈ ಮೂಲಕ ಕನ್ನಡ - ಕನ್ನಡಿಗ - ಕರ್ನಾಟಕದ ಕುರಿತು ಸಕಾರಾತ್ಮಕ ಚಿಂತನೆ ಮಾಡುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತಿನ 106ನೇ ಹಾಗೂ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಜರಿದ್ದು ತಮ್ಮ ಅಭಿಪ್ರಾಯ ಸೂಚಿಸಬೇಕೆಂದು ಕೋರಿಕೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗುತ್ತಿದೆ: ಸಿದ್ದರಾಮಯ್ಯ ವಾಗ್ದಾಳಿ