ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 'ಕೆಎಸ್ಆರ್ಟಿಸಿ' ಎಂದು ಹೆಸರು ಬಳಸುತ್ತಿರುವುದನ್ನು ಪ್ರಶ್ನಿಸಿ ಕೇರಳ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಪ್ರಸಕ್ತ ಹಾಗೂ ಮುಂಬರುವ ದಿನಗಳಲ್ಲಿ ಸಹ 'ಕೆಎಸ್ಆರ್ಟಿಸಿ' ಹೆಸರನ್ನು ಬಳಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಯಾವುದೇ ಕಾನೂನು ಅಡಚಣೆ ಇಲ್ಲ ಎಂದು ಕೆಎಸ್ಆರ್ಟಿಸಿ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 'ಕೆಎಸ್ಆರ್ಟಿಸಿ' ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣಪತ್ರ ನೀಡಲು ಅರ್ಜಿ ಸಲ್ಲಿಸಿತ್ತು. ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ 2013ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣಪತ್ರಗಳನ್ನು ಸಂಸ್ಥೆಯು 1973ರ ನವೆಂಬರ್ 1ರಿಂದ ಬಳಸುತ್ತಿರುವುದಾಗಿ ಮಂಜೂರು ಮಾಡಲಾಗಿದೆ. ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್ ಅವರಿಂದ 'KSRTC' ಲೋಗೋ ಮತ್ತು 'ಗಂಡಭೇರುಂಡ ಗುರುತು' ಬಳಕೆಗಾಗಿ ಕಾಪಿ ರೈಟ್ ಸಹ ಪಡೆಯಲಾಗಿದೆ.
ಇದಾದ ನಂತರ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಇದನ್ನು ಪ್ರಶ್ನಿಸಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಂಸ್ಥೆಯು 42 ವರ್ಷಗಳಿಂದ ಕೆಎಸ್ಆರ್ಟಿಸಿ ಹೆಸರನ್ನು ಬಳಸುತ್ತಿರುವ ಬಗ್ಗೆ ತಿಳಿದಿದೆ. ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿ ಸಲ್ಲಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅರ್ಹರಾಗಿರುವುದಿಲ್ಲ ಎಂದು ಕೆಎಸ್ಆರ್ಟಿಸಿ ವಾದಿಸಿದೆ.
ಕೇರಳ ಸಾರಿಗೆ ಸಂಸ್ಥೆ ಕೂಡ 2019ರಲ್ಲಿ ನಮ್ಮ ರಾಜ್ಯದ ಕೆಎಸ್ಆರ್ಟಿಸಿಗಿಂತಲೂ ಹಿಂದಿನಿಂದಲೇ ಆ ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು ನೋಂದಣಿ ಪಡೆದುಕೊಂಡಿದೆ. ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿದ್ದು, ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು. ಈ ಪ್ರಕರಣ ಮಂಗಳವಾರ ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದೆ. ಅರ್ಜಿ ವಿಚಾರಣೆ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೆಎಸ್ಆರ್ಟಿಸಿ ಹೆಸರು ಬಳಕೆ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಮದ್ರಾಸ್ ಹೈಕೋರ್ಟ್ ಕೇರಳ ಆರ್.ಟಿ.ಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ಕೇರಳ ಆರ್.ಟಿ.ಸಿ ಸಲ್ಲಿಸಿದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಪ್ರಸಕ್ತ ಹಾಗೂ ಮುಂಬರುವ ದಿನಗಳಲ್ಲಿ ಸಹ 'ಕೆಎಸ್ಆರ್ಟಿಸಿ' ಹೆಸರನ್ನು ಬಳಸಲು ಯಾವುದೇ ಕಾನೂನು ಅಡಚಣೆಯಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ವಿದ್ಯಾಚೇತನ ಆನ್ಲೈನ್ ಉಪಕ್ರಮಕ್ಕೆ ರಾಷ್ಟ್ರೀಯ ಪ್ರಶಸ್ತಿ