ಬೆಂಗಳೂರು: ಇಂದು ರಾಜ್ಯದಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಮಾನ್ಸೂನ್ ಚುರುಕಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಈ ಕುರಿತು ಮಾಹಿತಿ ನೀಡಿದ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್, ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಾನ್ಸೂನ್ ಚುರುಕಾಗಿದೆ. ಹೊಸನಗರದಲ್ಲಿ 23 ಸೆಂ.ಮೀ, ಆಗುಂಬೆಯಲ್ಲಿ 17 ಸೆಂ.ಮೀ, ಭಟ್ಕಳದಲ್ಲಿ 15 ಸೆಂ.ಮೀ, ಶಿರಾದಲ್ಲಿ 14 ಸೆಂ.ಮೀ, ಕುಂದಾಪುರ-ಮಂಕಿ 12 ಸೆಂ.ಮೀ ಹಾಗೂ ಬೆಳಗಾವಿಯಲ್ಲಿ 10 ಸೆಂ.ಮೀ ಮಳೆಯಾಗಿದೆ ಎಂದು ತಿಳಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 17 ರಿಂದ 21 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 17 ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 18, 19, 20 ರಂದು ಕೆಲ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದರು.
ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಉತ್ತಮ ಮಳೆಯಾಗಲಿದೆ. ಆಗಸ್ಟ್ 19, 20 ಹಾಗೂ 21 ರಂದು ಮಳೆಯ ಪ್ರಮಾಣ ತಗ್ಗಲಿದ್ದು, ಕೆಲವು ಕಡೆ ಮಾತ್ರ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ಬೀದರ್ನ ಕೆಲ ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕರು ಹೇಳಿದ್ರು.
ದಕ್ಷಿಣ ಒಳನಾಡಿನಲ್ಲಿ ಇಂದು ವ್ಯಾಪಕ ಮಳೆಯಾಗಲಿದ್ದು, ನಾಳೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ವರುಣನ ಆರ್ಭಟ ಇರಲಿದೆ. ಆಗಸ್ಟ್ 19 ರಿಂದ 21ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ಬಳಿಕ ಮಳೆಯ ಪ್ರಮಾಣ ತಗ್ಗಬಹುದು. ಇನ್ನು, ಶಿವಮೊಗ್ಗ, ಚಿಕ್ಕಮಂಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ನಿರೀಕ್ಷೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.